ನವದೆಹಲಿ, ಮಾ. 16 (DaijiworldNews/AA): ಭಾರತೀಯ ಹಡಗುಗಳಿಗೆ ಇರಾನ್ ಅನುಮತಿಸಿರುವುದರ ಹಿಂದೆ ಯಾವುದೇ ಒಪ್ಪಂದ ಇಲ್ಲ. ಇದು ಎರಡು ದೇಶಗಳ ನಡುವಿನ ಸಂಬಂಧದ ಫಲ, ಮಾತುಕತೆಯ ಫಲ ಎಂದು ಹಾರ್ಮುಜ್ ಜಲಸಂಧಿಯನ್ನು ಬ್ಲಾಕ್ ಮಾಡಿದ್ದ ಇರಾನ್ ಭಾರತೀಯ ಗ್ಯಾಸ್ ಟ್ಯಾಂಕರ್ಗಳು ಸಾಗಲು ಅನುಮತಿ ಕೊಟ್ಟಿರುವ ವಿಚಾರದ ಬಗ್ಗೆ ಕೇಂದ್ರ ಸಚಿವ ಡಾ. ಎಸ್ ಜೈಶಂಕರ್ ಮಾಹಿತಿ ನೀಡಿದ್ದಾರೆ.

"ಇರಾನ್ ಜೊತೆ ಭಾರತ ಒಪ್ಪಂದ ಮಾಡಿಕೊಂಡಿದೆ. ಹೀಗಾಗಿ, ಭಾರತದ ಹಡಗುಗಳಿಗೆ ಇರಾನ್ ಒಪ್ಪಿಗೆ ಕೊಟ್ಟಿದೆ ಎನ್ನುವ ಸುದ್ದಿಗಳು ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಜೈಶಂಕರ್ ಅವರು ಈ ಸ್ಪಷ್ಟನೆ ಕೊಟ್ಟಿದ್ದು, ಇರಾನ್ ಮಾಡಿರುವ ಸಹಾಯಕ್ಕೆ ಬದಲಾಗಿ ಭಾರತ ಮತ್ತೇನೂ ನೆರವು ಕೊಟ್ಟಿಲ್ಲ" ಎಂದು ತಿಳಿಸಿದರು.
"ಇದು ವಿನಿಮಯದ ವಿಚಾರ ಅಲ್ಲ. ಭಾರತ ಮತ್ತು ಇರಾನ್ ನಡುವೆ ಸಂಬಂಧ ಮೊದಲಿಂದಲೂ ಇದೆ. ಇದರ ಆಧಾರದ ಮೇಲೆ ನಾನು ಮಾತುಕತೆ ನಡೆಸುತ್ತಿದ್ದೇನೆ. ಈ ಮಾತುಕತೆಯು ಕೆಲ ಫಲ ಕೊಟ್ಟಿದೆ. ಈ ಪ್ರಕ್ರಿಯೆ ಇನ್ನೂ ನಡೆಯುತ್ತಿದೆ. ಮಾತುಕತೆಯಿಂದ ಫಲ ದೊರಕುತ್ತಿದೆ ಎಂದಾದರೆ ಸಹಜವಾಗಿ ನಾನು ಅದೇ ನಿಟ್ಟಿನಲ್ಲಿ ಮುಂದುವರಿಯುತ್ತೇನೆ" ಎಂದು ಹೇಳಿದರು.
"ಇವು ಇನ್ನೂ ಆರಂಭಿಕ ದಿನಗಳಷ್ಟೇ. ನಮ್ಮ ಇನ್ನೂ ಹಲವು ಹಡಗುಗಳು ಅಲ್ಲಿವೆ. ಈಗ ಎರಡು ಹಡಗುಗಳನ್ನು ಬಿಟ್ಟಿರುವುದು ಸ್ವಾಗತಾರ್ಹ ಬೆಳವಣಿಗೆ. ಹಾಗೆಯೇ, ಮಾತುಕತೆ ಮುಂದುವರಿಯುತ್ತಿರುವುದೂ ಹೌದು" ಎಂದರು.