ಬೆಂಗಳೂರು,ಮಾ. 16 (DaijiworldNews/AK): ದುಬೈ ವಿಮಾನ ನಿಲ್ದಾಣದ ಬಳಿ ಡ್ರೋನ್ ದಾಳಿ ಹಿನ್ನೆಲೆ ಭಾರತದಿಂದ ದುಬೈಗೆ ತೆರಳಬೇಕಿದ್ದ ವಿಮಾನಗಳ ಹಾರಾಟ ರದ್ದುಗೊಂಡಿದೆ.

ಏರ್ ಇಂಡಿಯಾ, ಏರ್ ಇಂಡಿಯಾ ಎಕ್ಸಪ್ರೆಸ್ ವಿಮಾನಗಳ ಹಾರಾಟ ಸ್ಥಗಿತಗೊಂಡಿದ್ದು, ಪ್ರಯಾಣಿಕರು ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಭವಿಷ್ಯದ ಬೇರೆ ದಿನಾಂಕಕ್ಕೆ ತಮ್ಮ ಪ್ರಯಾಣವನ್ನು ಮರುನಿಗದಿ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.
ಪ್ರಯಾಣ ಬೇಡವೆನ್ನುವವರು ಟಿಕೆಟ್ ರದ್ದುಗೊಳಿಸಿ ಪೂರ್ಣ ಹಣವನ್ನು ಮರಳಿ ಪಡೆಯಬಹುದಾಗಿದೆ. ಇನ್ನು ವಿಮಾನ ರದ್ದಿನಿಂದ ದುಬೈನಲ್ಲಿ ಸಿಲುಕಿರುವ ಪ್ರಯಾಣಿಕರು ಪರದಾಟ ನಡೆಸಿರುವ ಪ್ರಸಂಗವೂ ವರದಿಯಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಬಳಿಯ ಕೆಂಪೇಗೌಡ ಏರ್ಪೋರ್ಟ್ನಿಂದ ನಿರ್ಗಮನ ಮತ್ತು ಆಗಮಿಸಬೇಕಿದ್ದ ಒಟ್ಟು 24 ವಿಮಾನಗಳ ಹಾರಾಟ ಕ್ಯಾನ್ಸಲ್ ಆಗಿವೆ. ಕೆಂಪೇಗೌಡ ಏರ್ಪೋರ್ಟ್ನಿಂದ ನಿರ್ಗಮಿಸಬೇಕಿದ್ದ 11 ಫ್ಲೈಟ್ಗಳು ಮತ್ತು ಅರಬ್ ದೇಶಗಳಿಂದ ಕೆಐಎಬಿಗೆ ಆಗಮಿಸಬೇಕಿದ್ದ 13 ಫ್ಲೈಟ್ ರದ್ದಾಗಿವೆ. ಅಬುದಾಬಿ, ರಿಯಾದ್, ಜಿಡ್ಡಾ, ಡಮಾಮ್, ದುಬೈ ಹಾಗೂ ದೋಹಾದಿಂದ ಕೆಐಎಬಿಗೆ ಆಗಮಿಸಿದ್ದ ವಿಮಾನಗಳು ಕ್ಯಾನ್ಸಲ್ ಆಗಿವೆ ಎನ್ನಲಾಗಿದೆ.
ಮಂಗಳೂರು ಏರ್ಪೋರ್ಟ್ನಿಂದಲೂ ವಿಮಾನ ಹಾರಾಟ ವ್ಯತ್ಯಯ
ದುಬೈ ವಿಮಾನ ನಿಲ್ದಾಣದ ಬಳಿ ದಾಳಿ ಹಿನ್ನೆಲೆ ಮಂಗಳೂರಿನಿಂದ ದುಬೈ, ಡಮಾಮ್ ಮತ್ತು ಅಬುಧಾಬಿಗೆ ವಿಮಾನ ಸೇವೆ ಸ್ಥಗಿತಗೊಂಡಿದೆ. ಏರ್ ಇಂಡಿಯಾ ಎಕ್ಸ್ಪ್ರೆಸ್ನ ಇಂದು ಮತ್ತು ನಾಳೆಯ ವಿಮಾನ ಹಾರಾಟ ರದ್ದಾಗಿದೆ. ಯುನೈಟೆಡ್ ಅರಬ್ ಎಮಿರೇಟ್ಸ್ ವಿಮಾನ ನಿಲ್ದಾಣದ ಅಧಿಕಾರಿಗಳ ಸೂಚನೆಯ ಹಿನ್ನೆಲೆ ವಿಮಾನಯಾನ ಹಾರಾಟ ನಡೆಸುತ್ತಿಲ್ಲ ಎಂದು ತಿಳಿದುಬಂದಿದೆ.