ಮುಂಬೈ,ಆ 5 (Daijiworld News/RD): ಪ್ರವಾಹದಿಂದ ತತ್ತರಿಸಿ ಹೋದ ಮಹಾರಾಷ್ಟ್ರದ ಸಂತ್ರಸ್ತರಿಗೆ ಸಹಾಯ ಮಾಡಲು ಭಾರತದ ಕ್ರಿಕೆಟ್ ತಂಡದ ಮಾಜಿ ಆಟಗಾರ ಇರ್ಫಾನ್ ಪಠಾಣ್ ಹಾಗೂ ಯೂಸಫ್ ಪಠಾಣ್ ಮುಂದಾಗಿದ್ದಾರೆ.
>
ಗುಜಾರಾತ್ ವಡೋದರ ಪ್ರದೇಶವು ಮಳೆಯಿಂದಾಗಿ ಅಪಾರ ಹಾನಿ ಮತ್ತು ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುವಂತಾಗಿದ್ದು, ಅಲ್ಲದೆ ಜನಜೀವನ ಕೂಡ ಅಸ್ತವ್ಯಸ್ತಗೊಂಡಿತ್ತು. ಈ ಎಲ್ಲಾ ನೋವುಗಳನ್ನು ಗಮನಿಸಿದ ಮಾಜಿ ಕ್ರಿಕೆಟಿಗರು ಸಂತ್ರಸ್ಥರಿಗೆ ಆಹಾರ ಒದಗಿಸಿ, ಊಣ ಬಡಿಸುವ ಮೂಲಕ ತಮ್ಮ ಮಾನವೀಯತೆಯನ್ನು ವ್ಯಕ್ತಪಡಿಸಿದ್ದಾರೆ.
ಪ್ರವಾಹದಿಂದಾಗಿ ದಿನಿನಿತ್ಯದ ಊಟಕ್ಕಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು, ಯೂಸಫ್ ಪಠಾಣ್ ಹಾಗೂ ಇರ್ಫಾನ್ ಪಠಾಣ್ ಅವರು ತಮ್ಮ ತಂಡದೊಂದಿಗೆ ಸೇರಿ ಪ್ರವಾಹ ಸಂತ್ರಸ್ತರಿಗೆ ಆಹಾರ ಮತ್ತು ಮೂಲಭೂತ ಸೌಕರ್ಯವನ್ನು ಒದಗಿಸುವಲ್ಲಿ ಮುಂದಾದರು. ಸಂತ್ರಸ್ತರನ್ನು ಭೇಟಿ ಮಾಡಿ ಅವರಿಗೆ ಊಟವನ್ನು ಬಡಿಸುವ ದೃಶ್ಯ ಇದೀಗ ಸಾಮಾಜಿಕ ಜಾಲಾತಾಣದಲ್ಲಿ ಹರಿದಾಡುತ್ತಿದೆ.
ಸಹೋದರರ ಈ ಕಾರ್ಯಕ್ಕೆ ಎಲ್ಲಾ ಕಡೆಯಿಂದ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಇವರಿಬ್ಬರ ಈ ಕೆಲಸಕ್ಕೆ ಅಭಿಮಾನಿಯೊಬ್ಬರು ’ಮಳೆಯಿಂದಾಗಿ ಹಾಸ್ಟೆಲ್ನಲ್ಲಿ ಕೆಲವು ಯುವತಿಯರು ಸಿಕ್ಕಿ ಹಾಕಿಕೊಂಡಿದ್ದಾರೆ ಅಲ್ಲಿ ಅವರು ತಿನ್ನಲು ಆಹಾರಕ್ಕಾಗಿ ಒದ್ದಾಡುತ್ತಿದ್ದಾರೆ, ದಯವಿಟ್ಟು ಅವರಿಗೆ ಸಹಾಯ ಮಾಡಿ’ ಎಂದು ಇರ್ಫಾನ್ ಹಾಗೂ ಯೂಸಫ್ ಅವರಿಗೆ ಟ್ಯಾಗ್ ಮಾಡಿ ಟ್ವೀಟ್ ಮಾಡುವ ಮೂಲಕ ಅಲ್ಲಿನ ಸಂಕಷ್ಟವನ್ನು ತಿಳಿಸಿದರು. ಇದೀಗ ಈ ಟ್ವೀಟ್ನ್ನು ಗಮನಿಸಿ ರೀ ಟ್ವೀಟ್ ಮಾಡುವ ಮೂಲಕ ಸಹಾಯ ಮಾಡುತ್ತೇವೆ ಎಂದು ಪ್ರತಿಕ್ರಿಯಿಸಿದ್ದಾರೆ.