ಬೆಂಗಳೂರು, ಆ.05(Daijiworld News/SS): ಪಕ್ಷದ ಬಲವರ್ಧನೆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುತ್ತೇವೆ ಎಂದು ಪಕ್ಷದ ವರಿಷ್ಠ ಹೆಚ್. ಡಿ. ದೇವೇಗೌಡ ಹೇಳಿದ್ದಾರೆ.
ಯಡಿಯೂರಪ್ಪ ಸರ್ಕಾರ ಬಂದು 9 ದಿನಗಳಾಗಿದೆ. 3.8 ವರ್ಷ ಆಡಳಿತ ನಡೆಸಲಿ. ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನಕ್ಕೆ ಮುಂದಾಗುವುದಿಲ್ಲ. ಜನರು ಪ್ರಜ್ಞಾವಂತರಾಗಿದ್ದು, ಸಮಯ ಬಂದಾಗ ಸರಿಯಾಗಿ ತೀರ್ಪು ನೀಡುತ್ತಾರೆ. ಪಕ್ಷದ ಬಲವರ್ಧನೆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುವುದಾಗಿ ತಿಳಿಸಿದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋಲು ಹಾಗೂ ಹೆಚ್ ಡಿ ಕುಮಾರಸ್ವಾಮಿ ಅವರ ಸರ್ಕಾರ ಪತನಗೊಂಡಿದ್ದರೂ ದೇವೇಗೌಡರ ಉತ್ಸಾಹ ಕುಂದಿಲ್ಲ. ಪಕ್ಷ ಸಂಘಟನೆ ನಿಟ್ಟಿನಲ್ಲಿ ನಿರತರಾಗಿದ್ದೇವೆ. ರಾಹುಲ್ ಗಾಂಧಿ ಕಾಂಗ್ರೆಸ್ ಚಟುವಟಿಕೆಗಳಿಂದ ದೂರವಿದ್ದರೆ, ದೇವೇಗೌಡರ ವಯಸ್ಸು 87 ಆದರೂ ಪ್ರತಿದಿನ ಕಚೇರಿಯಲ್ಲಿಯೇ ಇರುತ್ತಾರೆ ಎಂದು ಹೇಳಿದರು.
ಹಳೆಯ ಮೈಸೂರು ಭಾಗದಲ್ಲಿ ಪಕ್ಷವನ್ನು ಮತ್ತೆ ಸಂಘಟಿಸುವ ನಿಟ್ಟಿನಲ್ಲಿ ಕಾರ್ಯತಂತ್ರ ಹೆಣೆಯುತ್ತಿದ್ದಾರೆ. ಮುಂಬರುವ ವಿಧಾನಸಭಾ ಉಪಚುನಾವಣೆಯಲ್ಲಿ ಮೈತ್ರಿ ಬಗ್ಗೆ ಈಗಲೂ ನಾವು ಮುಕ್ತವಾಗಿದ್ದೇವೆ. ನಮ್ಮೊಂದಿಗೆ ಸಹಕರಿಸಿದರೆ ಕಾಂಗ್ರೆಸ್ ಜೊತೆಗೆ ಮೈತ್ರಿ ಮುಂದುವರೆಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.
ಬಿಬಿಎಂಪಿ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆಗೆ ಮೈತ್ರಿ ಇಲ್ಲ. ಏಕಾಂಗಿಯಾಗಿ ಸ್ಪರ್ಧಿಸುತ್ತೇವೆ. ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲೂ ಸ್ವತಂತ್ರವಾಗಿ ಸ್ಪರ್ಧೆ ಮಾಡುತ್ತೇವೆ. ಯಾವುದೇ ಪಕ್ಷದೊಂದಿಗೆ ಸೀಟು ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ತಿಳಿಸಿದರು.