ನವದೆಹಲಿ, (Daijiworld News/MSP): ಜಮ್ಮು ಕಾಶ್ಮೀರದಲ್ಲಿ ಭಾರತವು ಭಾರೀ ಪ್ರಮಾಣದಲ್ಲಿ ಸೇನೆ ನಿಯೋಜಿಸಿ ಉಗ್ರರ ವಿರುದ್ದ ಕಟ್ಟು ನಿಟ್ಟಿನ ಕಾರ್ಯಾಚರಣೆ ನಡೆಯುತ್ತಿರುವ ಬೆಳವಣಿಗೆಗಳ ಮಧ್ಯೆ ಸೋಮವಾರ ದೆಹಲಿಯ, ಪ್ರಧಾನಿ ನರೇಂದ್ರ ಮೋದಿ ನಿವಾಸದಲ್ಲಿ ಕೇಂದ್ರ ಸಂಪುಟ ಸಭೆ ನಡೆದಿದೆ. ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಮುಂತಾದವರು ಸಂಪುಟ ಸಮಿತಿಯಲ್ಲಿ ಭಾಗವಹಿಸಿದ್ದರು.
ಜಮ್ಮು ಕಾಶ್ಮೀರದಲ್ಲಿ ಉದ್ವಿಗ್ನತೆ ಹೆಚ್ಚುತ್ತಿದ್ದಂತೆ ರಾಜಕೀಯ ನಾಯಕರಾದ ಓಮರ್ ಅಬ್ದುಲ್ಲಾ , ಮೆಹಬೂಬಾ ಮುಫ್ತಿ ಹಾಗೂ ಸಾಜದ್ ಲೋನ್ರನ್ನು ತಡರಾತ್ರಿ ಬಂಧಿಸಿ ಗೃಹ ಬಂಧನದಲ್ಲಿರಿಸಲಾಗಿದೆ. ನಿನ್ನೆ ಮಧ್ಯರಾತ್ರಿಯಿಂದಲೇ ಜಮ್ಮು ಮತ್ತು ಕಾಶ್ಮೀರದಲ್ಲಿ ಸೆಕ್ಷನ್ 144 ವಿಧಿಸಲಾಗಿದೆ. ಇಂಟರ್ನೆಟ್ ಸೇವೆಯನ್ನೂ ಕೂಡಾ ಭಾಗಶಃ ಸ್ಥಗಿತ ಮಾಡಲಾಗಿದೆ. ಹೆಚ್ಚಿನ ಸೇನಾ ಪಡೆಯನ್ನ ಕಣಿವೆ ರಾಜ್ಯದಲ್ಲಿ ನಿಯೋಜಿಸಲಾಗಿದೆ.
ಸಂವಿಧಾನದ 35ಎ ವಿಧಿಯನ್ನು ರದ್ದುಪಡಿಸುವ ದಿಟ್ಟ ಕ್ರಮವನ್ನು ಕೇಂದ್ರವು ಕೈಗೊಳ್ಳಲಿದೆ ಎಂಬ ಕುರಿತು ಸಾಕಷ್ಟು ಊಹಾಪೋಹಗಳೆದ್ದಿರುವುದು ರಾಜಕೀಯ ಪಕ್ಷಗಳಲ್ಲಿ ಆತಂಕ ಮೂಡಿಸಿದೆ.