ಬೆಂಗಳೂರು, ಆ.05(Daijiworld News/SS): ಈ ಬಾರಿ ಸಂಪುಟ ರಚನೆ ಬಗ್ಗೆ ಜಾಗುರಕತೆ ವಹಿಸಿರುವ ಹೈ ಕಮಾಂಡ್ ಆಕಾಂಕ್ಷಿಗಳ ವಿದ್ಯಾರ್ಹತೆ, ಆರೋಪ, ಜಾತಿ ಪಕ್ಷ ನಿಷ್ಠೆ, ಸಾಮಾರ್ಥ್ಯದ ಮಾನದಂಡದ ಆಧಾರದಲ್ಲಿ ಸಚಿವ ಸ್ಥಾನ ನೀಡಲು ಹೈ ಕಮಾಂಡ್ ಚಿಂತನೆ ನಡೆಸಿದೆ. ಸಂಪುಟ ರಚನೆ ಸೇರಿದಂತೆ ರಾಜ್ಯದ ಅಭಿವೃದ್ಧಿ ಯೋಜನೆಗಳ ಬಗ್ಗೆ ಕೇಂದ್ರ ಸರಕಾರದ ಗಮನ ಸೆಳೆಯಲು ಸಿಎಂ ಯಡಿಯೂರಪ್ಪ ಇಂದು ದಿಲ್ಲಿಗೆ ತೆರಳಲಿದ್ದಾರೆ.
ಈ ಕುರಿತು ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಾನು ಸಂಪುಟ ರಚನೆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ. ನಮ್ಮದು ರಾಷ್ಟ್ರೀಯ ಪಕ್ಷ. ವರಿಷ್ಠರು ಸೂಚನೆ ಕೊಡುವವರೆಗೂ ನಾವು ಏನನ್ನೂ ತೀರ್ಮಾನಿಸುವುದಿಲ್ಲ. ಯಾವತ್ತು ಸಂಪುಟ ರಚನೆ ಮಾಡಲು ಆದೇಶಿಸುತ್ತಾರೊ ಆ ಕ್ಷಣದಿಂದ 24 ಗಂಟೆಯೊಳಗೆ ಸಂಪುಟ ರಚನೆ ಮಾಡುತ್ತೇನೆ ಎಂದು ಹೇಳಿದ್ದಾರೆ.
ಇಂದು ಸಂಜೆ ನಾನು ದಿಲ್ಲಿಗೆ ತೆರಳುತ್ತೇನೆ. ಆಗಸ್ಟ್ 8ರವರೆಗೂ ಅಲ್ಲಿಯೇ ಇರುತ್ತೇನೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಭೇಟಿ ಮಾಡಿ ಸಿಎಂ ಆಗಲು ಅವಕಾಶ ನೀಡದ್ದಕ್ಕೆ ಧನ್ಯವಾದ ಸಮರ್ಪಿಸುತ್ತೇನೆ. ಸಂಪುಟ ರಚನೆ ಬಗ್ಗೆಯೂ ಚರ್ಚಿಸುತ್ತೇನೆ. ರಾಜ್ಯದ ಸಂಸದರ ಜತೆಗೆ ಸಭೆ ನಡೆಸಿ ರಾಜ್ಯದ ಬಾಕಿ ಯೋಜನೆಗಳ ಬಗ್ಗೆ ಮಾಹಿತಿ ಪಡೆಯುತ್ತೇನೆ ಎಂದು ಹೇಳಿದರು.