ಶ್ರೀನಗರ, ಆ.05(Daijiworld News/SS): ಕಾಶ್ಮೀರದ ವಿಚಾರದಲ್ಲಿ ಭಾರತ ತನ್ನ ನಿಲುವು ಉಳಿಸಿಕೊಳ್ಳಲು ವಿಫಲವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಮ್ಮುಕಾಶ್ಮೀರಕ್ಕೆ ಅನ್ವಯವಾಗಿದ್ದ ಸಂವಿಧಾನದ 370ನೇ ಪರಿಚ್ಛೇದವನ್ನು ಕೇಂದ್ರ ಸರ್ಕಾರ ರದ್ದು ಮಾಡಿದ ಬೆನ್ನಲ್ಲೇ, ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಭಾರತದ ಪ್ರಜಾಪ್ರಭುತ್ವದಲ್ಲಿ ಇಂದು ಕರಾಳ ದಿನವಾಗಿದೆ. ಕೇಂದ್ರ ಸರ್ಕಾರ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಂಡಿದ್ದು ಕಾನೂನು ಬಾಹಿರ ಹಾಗೂ ಅಸಾಂವಿಧಾನಿಕ ಎಂದು ಕಿಡಿಕಾರಿದ್ದಾರೆ.
ಕಾಶ್ಮೀರದ ವಿಚಾರದಲ್ಲಿ ಭಾರತ ತನ್ನ ನಿಲುವು ಉಳಿಸಿಕೊಳ್ಳಲು ವಿಫಲವಾಗಿದೆ. 370 ಪರಿಚ್ಛೇದ ರದ್ದಾಗಿದ್ದರಿಂದ ಜಮ್ಮುಕಾಶ್ಮೀರದ ಮೇಲೆ ದುಷ್ಪರಿಣಾಮ ಬೀರಲಿದೆ. ಇಲ್ಲಿನ ಜನರನ್ನು ಭಯಭೀತಿಗೊಳಪಡಿಸುವ ಮೂಲಕ ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಮಾಡುವುದೇ ಕೇಂದ್ರ ಸರ್ಕಾರದ ಆಶಯ ಎಂದು ದೂರಿದ್ದಾರೆ.
ಭಾರತ ಮತ್ತು ಜಮ್ಮುಕಾಶ್ಮೀರದ ನಾಯಕತ್ವದ ಮಧ್ಯೆ ಒಪ್ಪಂದವೊಂದು ಆಗಿತ್ತು. ಆದರೆ ಅದೇ ಒಪ್ಪಂದವನ್ನು ಇಂದು ಮುರಿಯಲಾಗಿದೆ. ಜಮ್ಮುಕಾಶ್ಮೀರವನ್ನು ಭಾರತಕ್ಕೆ ಸೇರಿಸಿಕೊಳ್ಳುತ್ತಿರುವ ಇವರು ಇಲ್ಲೇನು ಕೊಟ್ಟಿದ್ದಾರೆ..? ವಿಶೇಷ ಸ್ಥಾನಮಾನ ನಮಗೆ ಕೊಟ್ಟ ಉಡುಗೊರೆಯಾಗಿತ್ತು. ಇದೇ ಸಂಸತ್ತು ನಮಗದನ್ನು ಕೊಟ್ಟಿತ್ತು ಎಂದು ಹೇಳಿದರು.
ಕೇಂದ್ರ ಸರ್ಕಾರ ಮುಸ್ಲಿಂ ಬಾಹುಳ್ಯದ ಏಕೈಕ ರಾಜ್ಯವನ್ನು ಬದಲಾವಣೆ ಮಾಡುತ್ತಿದೆ. ಮುಸ್ಲಿಮರು ಅವರದ್ದೇ ರಾಜ್ಯದಲ್ಲಿ ಎರಡನೇ ದರ್ಜೆಯ ಪ್ರಜೆಗಳಾಗಿ ಬದುಕುವ ಸ್ಥಿತಿಯನ್ನು ತರಲು ಯತ್ನಿಸುತ್ತಿದೆ. ಕೆಲವು ಮಾಧ್ಯಮಗಳು, ನಾಗರಿಕ ಸಮಾಜ ಈ ಬೆಳವಣಿಗೆಯನ್ನು ನೋಡಿ ಸಂತೋಷದಿಂದ ಸಂಭ್ರಮಿಸುತ್ತಿರುವುದು ನೋಡಿದರೆ ಅಸಹ್ಯವೆನಿಸುತ್ತದೆ ಎಂದು ಹೇಳಿದ್ದಾರೆ.