ನವದೆಹಲಿ, ಮಾ. 24 (DaijiworldNews/TA): ಯುಪಿಎಸ್ಸಿ ಪರೀಕ್ಷೆಯು ಭಾರತದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾಗಿದೆ. ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಎಲ್ಲಾ ಅಭ್ಯರ್ಥಿಗಳ ಕನಸಾಗಿರುತ್ತದೆ. ಹೀಗೆ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ತಮ್ಮ ಕನಸನ್ನು ನನಸಾಗಿಸಿಕೊಂಡ ಆಕಾಶ್ ಧುಲ್ ಅವರ ಯಶೋಗಾಥೆ ಇದು. ಕೇಂದ್ರ ಲೋಕಸೇವಾ ಆಯೋಗ 2025ರ ನಾಗರಿಕ ಸೇವಾ ಪರೀಕ್ಷೆ ಫಲಿತಾಂಶ ಪ್ರಕಟಿಸಿದ್ದು, ದೇಶದ ಅತಿ ಪ್ರತಿಷ್ಠಿತ ಪರೀಕ್ಷೆಯಲ್ಲಿ ಆಕಾಶ್ ಧುಲ್ ಮೂರನೇ ಸ್ಥಾನ ಪಡೆದಿದ್ದಾರೆ.

ಹರಿಯಾಣ ಮೂಲದ ಆಕಾಶ್ ಧುಲ್ 2021ರಿಂದ ನಾಗರಿಕ ಸೇವಾ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು. ಅವರು ರಾಜಕೀಯ ಹಿನ್ನೆಲೆಯ ಕುಟುಂಬದಿಂದ ಬಂದಿದ್ದು, ಅವರ ತಂದೆ ಕೃಷ್ಣ ಧುಲ್ ಬಿಜೆಪಿ ನಾಯಕರಾಗಿದ್ದಾರೆ. ತಾಯಿ ಶಾಲಾ ಪ್ರಾಂಶುಪಾಲರಾಗಿದ್ದಾರೆ.
ಶಿಕ್ಷಣ ಮತ್ತು ಪ್ರಾರಂಭಿಕ ಜೀವನ : ಆಕಾಶ್ ಧುಲ್ ಹರಿಯಾಣದ ರೋಹ್ಟಕ್ನಲ್ಲಿ ಜನಿಸಿ, ನಂತರ ಪಂಚಕುಲಕ್ಕೆ ಸ್ಥಳಾಂತರಗೊಂಡರು. ಚಂಡೀಗಢದಲ್ಲಿ ಶಾಲಾ ಶಿಕ್ಷಣ ಪೂರ್ಣಗೊಳಿಸಿ, ಬಳಿಕ ಶ್ರೀ ರಾಮ್ ಕಾಲೇಜ್ ಆಫ್ ಕಾಮರ್ಸ್, ದೆಹಲಿ ವಿಶ್ವವಿದ್ಯಾಲಯದಲ್ಲಿ ಬಿಕಾಂ (ಆನರ್ಸ್) ಪದವಿ ಪಡೆದರು.
UPSC ಪ್ರಯಾಣ : ಪದವಿ ಬಳಿಕ ದೆಹಲಿಯಲ್ಲಿಯೇ ಉಳಿದು ಸಿವಿಲ್ ಸರ್ವೀಸ್ ಪರೀಕ್ಷೆಗೆ ತಯಾರಿ ನಡೆಸಿದರು. 2023ರಲ್ಲಿ ಅವರು AIR 342 ಗಳಿಸಿದ್ದರೂ, ಮುಂದಿನ ಪ್ರಯತ್ನದಲ್ಲಿ ಸಾಧನೆ ಹೆಚ್ಚಿಸಿಕೊಂಡು AIR 3 ಪಡೆದುಕೊಂಡಿದ್ದಾರೆ. ಕ್ಯಾಂಪಸ್ ಪ್ಲೇಸ್ಮೆಂಟ್ ಅವಕಾಶವಿದ್ದರೂ ಅದನ್ನು ತಳ್ಳಿಹಾಕಿ, “ಬಾಲ್ಯದ ಕನಸು” ಆಗಿದ್ದ ನಾಗರಿಕ ಸೇವೆಗಳತ್ತ ಸಂಪೂರ್ಣ ಗಮನಹರಿಸಿದರು.
ಈ ವರ್ಷ ವಿವಿಧ ಸೇವೆಗಳಿಗೆ ನೇಮಕಾತಿಗಾಗಿ UPSC ಒಟ್ಟು 958 ಅಭ್ಯರ್ಥಿಗಳನ್ನು ಶಿಫಾರಸು ಮಾಡಿದ್ದು, ಅಂತಿಮ ನೇಮಕಾತಿ ಸರ್ಕಾರದ ಖಾಲಿ ಹುದ್ದೆಗಳ ಆಧಾರದ ಮೇಲೆ ನಿರ್ಧಾರವಾಗಲಿದೆ.