ನವದೆಹಲಿ, ಮಾ. 24 (DaijiworldNews/TA): ನವದೆಹಲಿ ವಿಧಾನಸಭಾ ಸ್ಪೀಕರ್ ವಿಜೇಂದರ್ ಗುಪ್ತಾ ಅವರಿಗೆ ಬಾಂಬ್ ಬೆದರಿಕೆ ಇ-ಮೇಲ್ ಬಂದಿರುವುದು ಆತಂಕಕ್ಕೆ ಕಾರಣವಾಗಿದೆ. ವಿಧಾನಸಭೆ ಕಟ್ಟಡ ಮತ್ತು ದೆಹಲಿ ಮೆಟ್ರೋ ನಿಲ್ದಾಣಗಳನ್ನು ಸ್ಫೋಟಿಸುವುದಾಗಿ ಇ-ಮೇಲ್ನಲ್ಲಿ ಬೆದರಿಕೆ ಹಾಕಲಾಗಿದೆ.

ವಿಧಾನಸಭೆ ಸ್ಪೀಕರ್ ಕಚೇರಿ ಮಾಹಿತಿ ಪ್ರಕಾರ, ಲೆಫ್ಟಿನೆಂಟ್ ಗವರ್ನರ್ ತರಂಜಿತ್ ಸಿಂಗ್ ಸಂಧು, ಮುಖ್ಯಮಂತ್ರಿ ರೇಖಾ ಗುಪ್ತಾ ಹಾಗೂ ಸಚಿವ ಮಂಜಿಂದರ್ ಸಿಂಗ್ ಸಿರ್ಸಾ ಅವರಿಗೂ ಇದೇ ರೀತಿಯ ಬೆದರಿಕೆ ಸಂದೇಶಗಳು ಬಂದಿವೆ. ಇದಲ್ಲದೆ, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರಿಗೂ ಬೆದರಿಕೆ ಹಾಕಲಾಗಿದೆ ಎಂದು ತಿಳಿದುಬಂದಿದೆ.
ಸ್ಪೀಕರ್ ವಿಜೇಂದರ್ ಗುಪ್ತಾ ಅವರಿಗೆ ಬೆಳಗ್ಗೆ 7.49ಕ್ಕೆ ಇ-ಮೇಲ್ ಬಂದಿದ್ದು, ವಿಧಾನಸಭೆಗೆ 7.28ರ ವೇಳೆಗೆ ಬೆದರಿಕೆ ಸಂದೇಶ ತಲುಪಿತ್ತು. ತಕ್ಷಣವೇ ಭದ್ರತಾ ಸಿಬ್ಬಂದಿ ಸ್ಪೀಕರ್ ಕೊಠಡಿಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
ಕಳೆದ ಫೆಬ್ರವರಿಯಲ್ಲಿಯೂ ಇಂತಹ ಸರಣಿ ಬಾಂಬ್ ಬೆದರಿಕೆ ಇ-ಮೇಲ್ಗಳು ಬಂದಿದ್ದವು. ದೆಹಲಿ ವಿಧಾನಸಭೆ, ಸಚಿವಾಲಯ, ಕೆಂಪುಕೋಟೆ ಹಾಗೂ ಎರಡು ಶಾಲೆಗಳು ಸೇರಿದಂತೆ ಹಲವು ಸ್ಥಳಗಳಿಗೆ ಬೆದರಿಕೆ ಕರೆಗಳು ಬಂದಿದ್ದವು. ಆದರೆ, ಭದ್ರತಾ ಪಡೆಗಳ ಪರಿಶೀಲನೆಯ ನಂತರ ಅವು ಹುಸಿ ಕರೆಗಳು ಎಂದು ದೃಢಪಟ್ಟಿತ್ತು. ಈ ಪ್ರಕರಣದ ಹಿಂದೆ ಇರುವ ದುಷ್ಕರ್ಮಿಗಳನ್ನು ಪತ್ತೆಹಚ್ಚಲು ಸೈಬರ್ ತಂಡಗಳು ಮುಂದಾಗಿವೆ. ಬಾಂಬ್ ಬೆದರಿಕೆ ಇ-ಮೇಲ್ ಕಳುಹಿಸಲು ಬಳಸಿದ ಐಪಿ ವಿಳಾಸವನ್ನು ಪತ್ತೆಹಚ್ಚಲು ಪ್ರಯತ್ನಿಸಲಾಗುತ್ತಿದೆ.
ಪೋಲೀಸರ ಪ್ರಕಾರ, ಆರೋಪಿಗಳು ತನಿಖೆಯನ್ನು ದಾರಿ ತಪ್ಪಿಸಲು ವರ್ಚುವಲ್ ಪ್ರೈವೇಟ್ ನೆಟ್ವರ್ಕ್ (VPN) ಬಳಸಿ ಇ-ಮೇಲ್ ಕಳುಹಿಸುತ್ತಿದ್ದಾರೆ. ಈ ಘಟನೆ ಹಿನ್ನೆಲೆಯಲ್ಲಿ ರಾಜಧಾನಿಯಲ್ಲಿ ಭದ್ರತೆ ಹೆಚ್ಚಿಸಲಾಗಿದ್ದು, ಎಲ್ಲ ಪ್ರಮುಖ ಸ್ಥಳಗಳಲ್ಲಿ ತೀವ್ರ ತಪಾಸಣೆ ನಡೆಯುತ್ತಿದೆ.