ನವದೆಹಲಿ, ಮಾ. 24 (DaijiworldNews/AK):ದೇಶದಲ್ಲಿ ಕಚ್ಚಾ ತೈಲ ಸಾಕಷ್ಟು ಲಭ್ಯವಿದೆ. ಭಾರತವು ಕಚ್ಚಾ ತೈಲಕ್ಕಾಗಿ ಸಾಕಷ್ಟು ಸಂಗ್ರಹಣಾ ಸೌಲಭ್ಯಗಳು ಮತ್ತು ವಿಶ್ವಾಸಾರ್ಹ ಪೂರೈಕೆ ವ್ಯವಸ್ಥೆಗಳನ್ನ ಹೊಂದಿದೆ ಎಂದು ರಾಷ್ಟ್ರಕ್ಕೆ ಮತ್ತು ಸದನಕ್ಕೆ ನಾನು ಭರವಸೆ ನೀಡುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ರಾಜ್ಯಸಭೆಯಲ್ಲಿ ಈ ಕುರಿತು ಮಾತನಾಡಿದ ಅವರು, ಪಶ್ಚಿಮ ಏಷ್ಯಾದಲ್ಲಿನ ಯುದ್ಧವು ಜಾಗತಿಕವಾಗಿ ಗಂಭೀರ ಇಂಧನ ಬಿಕ್ಕಟ್ಟು ಸೃಷ್ಟಿಸುತ್ತಿರುವುದರಿಂದ ಕೇಂದ್ರ ಸರ್ಕಾರ, ಸಾಧ್ಯವಿರುವ ಎಲ್ಲಾ ಮೂಲಗಳಿಂದ ಇಂಧನ ಖರೀದಿಸಲು ಯತ್ನಿಸುತ್ತಿದೆ. ಮುಂದಿನ ದಿನಗಳಲ್ಲೂ ಪ್ರಯತ್ನ ಮುಂದುವರಿಯಲಿದೆ ಎಂದು ತಿಳಿಸಿದರು.
ಯಾವುದೇ ಒಂದು ಇಂಧನ ಮೂಲದ ಮೇಲಿನ ಅತಿಯಾದ ಅವಲಂಬನೆಯನ್ನ ತಪ್ಪಿಸುವುದು ನಮ್ಮ ಸರ್ಕಾರದ ಉದ್ದೇಶವಾಗಿದೆ. ದೇಶಿಯ ಅನಿಲ ಪೂರೈಕೆಯನ್ನ ಹೆಚ್ಚಿಸಲು ದ್ರವೀಕೃತ ಪೆಟ್ರೋಲಿಯಂ ಅನಿಲ ಜೊತೆಗೆ ಪೈಪ್ಡ್ ನೈಸರ್ಗಿಕ ಅನಿಲ ಬಳಕೆಯನ್ನ ಉತ್ತೇಜಿಸುತ್ತಿದ್ದೇವೆ ಎಂದರು.
ಭಾರತವು ತನ್ನ ಇಂಧನ ಅಗತ್ಯಗಳಿಗಾಗಿ 27 ದೇಶಗಳಿಂದ ಕಚ್ಚಾ ತೈಲ, ಎಲ್ಎನ್ಜಿ ಮತ್ತು ಎಲ್ಪಿಜಿ ಅನ್ನು ಆಮದು ಮಾಡಿಕೊಳ್ಳುತ್ತಿದೆ. ಇಂದು ದೇಶವು 41 ದೇಶಗಳಿಂದ ತನ್ನ ಇಂಧನ ಆಮದುಗಳನ್ನ ಪಡೆಯುತ್ತಿದೆ ಮಾಹಿತಿ ನೀಡಿದರು.
ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧವು ನಮ್ಮ ವ್ಯಾಪಾರ ಮಾರ್ಗಗಳ ಮೇಲೆ ಪರಿಣಾಮ ಬೀರುತ್ತಿವೆ ಎಂದು ಪ್ರಧಾನಿ ಮೋದಿ ಒಪ್ಪಿಕೊಂಡಿದ್ದಾರೆ. ಇದರಿಂದಾಗಿ ಪೆಟ್ರೋಲ್, ಡೀಸೆಲ್, ಅನಿಲ ಮತ್ತು ರಸಗೊಬ್ಬರಗಳಂತಹ ಅಗತ್ಯ ವಸ್ತುಗಳ ನಿಯಮಿತ ಪೂರೈಕೆಗೆ ಅಡ್ಡಿಯುಂಟಾಗುತ್ತಿದೆ. ಆದರೆ ದೇಶದ ಅಗತ್ಯತೆಗಳನ್ನ ಪೂರೈಸಲು ನಮ್ಮ ಸರ್ಕಾರ ಎಲ್ಲಾ ರೀತಿಯ ಕ್ರಮ ಕೈಗೊಂಡಿದೆ ಎಂದು ತಿಳಿಸಿದರು.
‘