ಬಳ್ಳಾರಿ,ಆ 5 (Daijiworld News/RD): ರಾಜ್ಯದ ಎಲ್ಲೆಡೆ ಧಾರಾಕಾರ ಮಳೆ ಸುರಿಯುತ್ತಿದ್ದು, ಕೃಷ್ಣಾ ನದಿಯಿಂದ ಮಹಾರಾಷ್ಟ್ರ ಬಿಡುಗಡೆ ಮಾಡುತ್ತಿರುವ ಹೆಚ್ಚುವರಿ ನೀರಿನಿಂದಾಗಿ ಉತ್ತರ ಕರ್ನಾಟಕದ ಹಲವೆಡೆ ಪ್ರವಾಹ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಪ್ರವಾಹಪೀಡಿತ ಪ್ರದೇಶಗಳಲ್ಲಿ ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ.
ಸಮೀಕ್ಷೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೆರೆ ಸಂತ್ರಸ್ಥರ ರಕ್ಷಣೆಗಾಗಿ ಸೇನೆಯನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ, ಪ್ರವಾಹದಿಂದ ಆಗಿರುವ ಹಾನಿಗಳಿಗೆ ಪರಿಹಾರ ಕಾರ್ಯ ಕೈಗೊಳ್ಳಲು ಅನುದಾನ ಬಿಡುಗಡೆ ಮಾಡುತ್ತೇವೆ. ಬಿಡುಗಡೆಯಾದ ಹಣವನ್ನು ಅಧಿಕಾರಿಗಳು ಶೀಘ್ರವಾಗಿ ಸಂತ್ರಸ್ತರಿಗೆ ತಲುಪಿಸಬೇಕು ಎಂದು ಅಧಿಕಾರಿಗಳಿಗೆ ಈ ಸಂದರ್ಭದಲ್ಲಿ ಹೇಳಿದರು. ನೆರೆಪೀಡಿತ ಗ್ರಾಮದ ಜನರನ್ನು ಮತ್ತು ಜಾನುವಾರುಗಳನ್ನು ತಾತ್ಕಾಲಿಕವಾಗಿ ಸ್ಥಳಾಂತರ ಮಾಡಲಾಗಿದೆ. ಅಗತ್ಯ ಬಿದ್ದರೆ ಮತ್ತಷ್ಟು ಗ್ರಾಮಗಳ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.
ವೈಮಾನಿಕ ಸಮೀಕ್ಷೆಯ ಬಳಿಕ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ನೆರೆ ಪರಿಹಾರಕ್ಕೆ ಬೇಕಾದ ಹೆಚ್ಚಿನ ನೆರವು ಕೊಡುವಂತೆ ಮನವಿ ಮಾಡುತ್ತೇವೆ. ಈಗಾಗಲೇ ನಿನ್ನೆ ನೆರೆಪೀಡಿತ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮಾಡುವ ಮೂಲಕ ಸಭೆ ನಡೆಸಿದ್ದು, ತುರ್ತು ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದಾರೆ. ಮಹಾರಾಷ್ಟ್ರ ಕೊಯ್ನಾಂ ಡ್ಯಾಂ ಭರ್ತಿಯಾಗಿದ್ದು, ಅತೀ ಹೆಚ್ಚು ನೀರನ್ನು ಹೊರಬಿಡುತ್ತಿರುವ ಪರಿಣಾಮವಾಗಿ ಪ್ರವಾಹ ಉಂಟಾಗಿದೆ.