ನವದೆಹಲಿ, ಮಾ. 25 (DaijiworldNews/TA) : ಎಲ್ಪಿಜಿ ಸಮಸ್ಯೆಯಂತೆ, ದೇಶದ ಹಲವೆಡೆ ಜನರು ಈಗ ಪೆಟ್ರೋಲ್ ಮತ್ತು ಡೀಸಲ್ ಕೊರತೆಯ ಭಯದಲ್ಲಿ ಉದ್ದುದ್ದ ಕ್ಯೂಗಳಲ್ಲಿ ನಿಂತಿದ್ದಾರೆ. ಹೈದರಾಬಾದ್, ಬೆಂಗಳೂರು, ಇಂದೋರ್, ಅಹ್ಮದಾಬಾದ್, ಸೂರತ್, ನಾಗಪುರ್ ಸೇರಿದಂತೆ ಅನೇಕ ನಗರಗಳಲ್ಲಿ ಪೆಟ್ರೋಲ್ ಪಂಪ್ಗಳಲ್ಲಿ ಫುಲ್ ಟ್ಯಾಂಕ್ ತುಂಬಿಸಲು ಪ್ರಯತ್ನಿಸುತ್ತಿರುವ ವಾಹನ ಸವಾರರ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಆದರೆ ಭಾರತ್ ಪೆಟ್ರೋಲಿಯಂ ನಿಗಮ ಈ ಎಲ್ಲ ವದಂತಿಗಳನ್ನು ಖಂಡಿಸಿದೆ.

ಸಂಸ್ಥೆಯು ಹೇಳಿದ ಪ್ರಕಾರ “ಕೆಲ ಪ್ರದೇಶಗಳಲ್ಲಿ ಪೆಟ್ರೋಲ್ ಮತ್ತು ಡೀಸಲ್ ಕೊರತೆ ಇದೆ ಎನ್ನುವ ವದಂತಿ ಆಧಾರ ರಹಿತವಾಗಿದೆ. ದೇಶಾದ್ಯಂತ ಎಲ್ಲಿಯೂ ಇಂಧನ ಕೊರತೆ ಇಲ್ಲ. ಭಾರತವು ಪೆಟ್ರೋಲ್ ಮತ್ತು ಡೀಸಲ್ ರಫ್ತು ಮಾಡುವ ದೇಶವಾಗಿದೆ. ನಮ್ಮಲ್ಲಿ ಸಾಕಷ್ಟು ಪ್ರಮಾಣದ ಕಚ್ಛಾ ತೈಲ, ಪೆಟ್ರೋಲ್, ಡೀಸಲ್ ಮತ್ತು ಎಟಿಎಫ್ ಸಂಗ್ರಹ ಇದೆ. ಸರಬರಾಜು ಸರಪಳಿ ಯಾವುದೇ ವ್ಯತ್ಯಯವಿಲ್ಲದೆ ಕಾರ್ಯನಿರ್ವಹಿಸುತ್ತಿದೆ,” ಎಂದು ತಿಳಿಸಿದೆ.
ತೈಲ ಮಾರುಕಟ್ಟೆ ಸಂಸ್ಥೆಗಳು ನಾಗರಿಕರನ್ನು ಅನಗತ್ಯ ಆತಂಕದಿಂದ ದೂರವಿಟ್ಟು, ಇಂಧನ ಲಭ್ಯತೆ ಸಾಕಷ್ಟು ಮತ್ತು ಸ್ಥಿರವಾಗಿದೆ ಎಂದು ಭರವಸೆ ನೀಡಿದ್ದಾರೆ. ಜನರು ಎಲ್ಪಿಜಿ ಕೊರತೆ ಎದುರಿಸುತ್ತಿರುವಂತೆ, ಪೆಟ್ರೋಲ್ ಮತ್ತು ಡೀಸಲ್ ಸರಬರಾಜಿನಲ್ಲಿ ಯಾವುದೇ ತೊಂದರೆ ಇಲ್ಲವೆಂದು ಸರ್ಕಾರ ಒತ್ತಿ ಹೇಳಿದೆ.