ನವದೆಹಲಿ, ಮಾ. 25 (DaijiworldNews/TA): ಕೇರಳ ಮೂಲದ ನರ್ಸ್ ನಿಮಿಷಾ ಪ್ರಿಯಾ ಅವರ ಪರವಾಗಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಸರ್ವೋಚ್ಚ ನ್ಯಾಯಾಲಯವು ಮಂಗಳವಾರ ವಿಷಯದಲ್ಲಿ ಯಾವುದೇ ಹೊಸ ಬೆಳವಣಿಗೆಯಾಗುವವರೆಗೆ ಅನಿರ್ದಿಷ್ಟಾವಧಿಗೆ ಮುಂದೂಡಿದೆ.

ನಿಮಿಷಾ ಯೆಮೆನ್ನಲ್ಲಿ ಸ್ಥಳೀಯ ವ್ಯಕ್ತಿಯೋರ್ವರ ಹತ್ಯೆಗಾಗಿ ಅಲ್ಲಿಯ ಜೈಲಿನಲ್ಲಿ ಮರಣದಂಡನೆಯನ್ನು ಎದುರಿಸುತ್ತಿದ್ದಾರೆ. ನ್ಯಾಯಾಲಯಕ್ಕೆ ವರದಿ ಮಾಡುವಂತಹ ಯಾವುದೇ ಹೊಸ ಪ್ರಗತಿಯಾಗಿಲ್ಲ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ವಿಕ್ರಮಜಿತ್ ಬ್ಯಾನರ್ಜಿಯವರು ನ್ಯಾ.ವಿಕ್ರಮನಾಥ ನೇತೃತ್ವದ ಪೀಠಕ್ಕೆ ತಿಳಿಸಿದರು.
ನರ್ಸ್ ಕುಟುಂಬದ ಪರ ಹಿರಿಯ ವಕೀಲ ಆರ್.ಬಸಂತ್ ಮತ್ತು ವಕೀಲ ಸುಭಾಷಚಂದ್ರನ್ ಅವರು, ಸರ್ವೋಚ್ಚ ನ್ಯಾಯಾಲಯದ ಮಧ್ಯಪ್ರವೇಶಗಳು ನಿಮಿಷಾರ ಜೀವವನ್ನುಳಿಸಲು ನೆರವಾಗಿವೆ ಎಂದು ಉಲ್ಲೇಖಿಸಿ ವಿಚಾರಣೆಯನ್ನು ಮುಂದೂಡುವಂತೆ ಕೋರಿದರು. ಪ್ರಕರಣವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ ಪೀಠವು, ಭವಿಷ್ಯದಲ್ಲಿ ನಿಮಿಷಾಗೆ ಸಂಬಂಧಿಸಿದಂತೆ ಯಾವುದೇ ಹೊಸ ತಿರುವನ್ನು ಸೂಚಿಸಿ ಅರ್ಜಿಯನ್ನು ಸಲ್ಲಿಸಿದರೆ ಅರ್ಜಿಗಳನ್ನು ವಿಚಾರಣೆಗೆ ಪಟ್ಟಿ ಮಾಡಲಾಗುವುದು ಎಂದು ತಿಳಿಸಿತು.
ಶರಿಯಾ ಕಾನೂನಿನಡಿ ಅನುಮತಿಸಿರುವಂತೆ ಕ್ಷಮಾದಾನಕ್ಕೆ ಪ್ರತಿಯಾಗಿ ‘ರಕ್ತದ ಹಣ (ಪರಿಹಾರ ಧನ)’ ಪಾವತಿಸಲು ಮೃತವ್ಯಕ್ತಿಯ ಕುಟುಂಬ ಸದಸ್ಯರೊಂದಿಗೆ ಮಾತುಕತೆಗಳನ್ನು ಏರ್ಪಡಿಸಲು ಹೊಸ ಮಧ್ಯವರ್ತಿಯೋರ್ವರು ಮುಂದೆ ಬಂದಿದ್ದಾರೆ ಎಂದು ಕಳೆದ ವರ್ಷದ ಅಕ್ಟೋಬರ್ನಲ್ಲಿ ನ್ಯಾಯಾಲಯಕ್ಕೆ ತಿಳಿಸಲಾಗಿತ್ತು.