ನವದೆಹಲಿ, ಮಾ. 27 (DaijiworldNews/TA) : ಜಾಗತಿಕ ಇಂಧನ ಬಿಕ್ಕಟ್ಟು ಮತ್ತು ಬೆಲೆ ಏರಿಕೆ ಭೀತಿಯ ನಡುವೆಯೇ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಭಾರೀ ಪ್ರಮಾಣದಲ್ಲಿ ಕಡಿತಗೊಳಿಸಿದೆ.

ಇತ್ತೀಚೆಗೆ ಹೊರ್ಮಜ್ ಜಲಸಂಧಿ ಪ್ರದೇಶದಲ್ಲಿ ಉಂಟಾದ ಉದ್ವಿಗ್ನತೆ ಹಾಗೂ ಅಮೆರಿಕ-ಇರಾನ್ ಸಂಘರ್ಷದ ಪರಿಣಾಮ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಗಳು ತೀವ್ರ ಏರಿಕೆಯಾಗಿದ್ದವು. ಬ್ಯಾರೆಲ್ಗೆ 114 ಡಾಲರ್ಗಿಂತ ಹೆಚ್ಚು ಏರಿಕೆಯಾದ ಹಿನ್ನೆಲೆ, ಭಾರತ ಸರ್ಕಾರ ಈ ತುರ್ತು ಕ್ರಮ ಕೈಗೊಂಡಿದೆ.
ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು ಲೀಟರ್ಗೆ 13 ರೂಪಾಯಿಯಿಂದ 3 ರೂಪಾಯಿಗೆ ಇಳಿಸಲಾಗಿದೆ. ಡೀಸೆಲ್ ಮೇಲಿನ ಸುಂಕವನ್ನು 10 ರೂಪಾಯಿಯಿಂದ ಸಂಪೂರ್ಣ ಶೂನ್ಯಕ್ಕೆ ಇಳಿಸಲಾಗಿದೆ. ಈ ಕ್ರಮದಿಂದ ದೇಶೀಯ ಮಾರುಕಟ್ಟೆಯಲ್ಲಿ ಇಂಧನ ದರ ಏರಿಕೆಯನ್ನು ನಿಯಂತ್ರಿಸಲು ಸಹಾಯವಾಗಲಿದೆ ಎಂದು ಸರ್ಕಾರ ನಿರೀಕ್ಷಿಸಿದೆ. ಅಮೆರಿಕ-ಇರಾನ್ ನಡುವಿನ ಉದ್ವಿಗ್ನತೆ ಮತ್ತು ಇಂಧನ ಸರಬರಾಜಿನ ಅಸ್ಥಿರತೆಯಿಂದ ಜಾಗತಿಕ ಮಟ್ಟದಲ್ಲಿ ಅನಿಶ್ಚಿತತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಗ್ರಾಹಕರಿಗೆ ತಾತ್ಕಾಲಿಕ ತಣಿವು ನೀಡುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.