ಬೆಂಗಳೂರು, ಮಾ. 27 (DaijiworldNews/TA) : ನಗರದ ಹೊರವಲಯದಲ್ಲಿರುವ ಶ್ರೀ ಸಿದ್ಧಾರ್ಥ ವೈದ್ಯಕೀಯ ವಿಜ್ಞಾನ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರಕಾಲೇಜಿನಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ತರಗತಿಯ ವೇಳೆ ಪ್ರಾಧ್ಯಾಪಕರೊಬ್ಬರು ವಿದ್ಯಾರ್ಥಿನಿಗೆ ವಿವಾಹ ಪ್ರಸ್ತಾಪ ಮಾಡಿದ್ದು, ನಂತರ ಉಂಟಾದ ಗೊಂದಲದಿಂದ ಅವರನ್ನು ಬಂಧಿಸಿ ಸೇವೆಯಿಂದ ವಜಾಗೊಳಿಸಲಾಗಿದೆ.

ಈ ಘಟನೆ ಮಾರ್ಚ್ 23ರಂದು ನಡೆದಿದ್ದು, ಡಾ. ಅಬ್ದುಲ್ ರೆಹಮಾನ್ ಷರೀಫ್ ಎಂಬ ಪ್ರಾಧ್ಯಾಪಕರು ತರಗತಿಯಲ್ಲೇ ವಿದ್ಯಾರ್ಥಿನಿಯೊಬ್ಬಳು ತನ್ನ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾಳೆ ಎಂದು ಹೇಳಿಕೊಂಡು, ಅದಕ್ಕೆ ಪ್ರತಿಯಾಗಿ “ನಾನು ನಿನ್ನನ್ನು ಪ್ರೀತಿಸುತ್ತೇನೆ” ಎಂದು ಹೇಳಿದರೆಂದು ವರದಿಯಾಗಿದೆ. ಜೊತೆಗೆ ವಿದ್ಯಾರ್ಥಿಗಳಿಗೆ ಚಾಕೊಲೇಟ್ ಹಂಚಲು ಯತ್ನಿಸಿದ್ದಾರಂತೆ.
ಆದರೆ, ಸಂಬಂಧಿತ ವಿದ್ಯಾರ್ಥಿನಿ ತಕ್ಷಣವೇ ಈ ಹೇಳಿಕೆಯನ್ನು ಖಂಡಿಸಿ, ವಿಷಯವನ್ನು ಕಾಲೇಜು ಪ್ರಾಂಶುಪಾಲರ ಗಮನಕ್ಕೆ ತರುವಂತೆ ಕೇಳಿಕೊಂಡಿದ್ದಾಳೆ. ಪ್ರಾಧ್ಯಾಪಕರು ತಮ್ಮ ಹೇಳಿಕೆಗೆ ಸಿಸಿಟಿವಿ ಪುರಾವೆಗಳಿವೆ ಎಂದು ಒತ್ತಾಯಿಸಿದಾಗ, ವಿದ್ಯಾರ್ಥಿನಿ ಅದನ್ನು ತೋರಿಸಲು ಸವಾಲು ಹಾಕಿದ್ದಾಳೆ. ಇದರಿಂದ ಮಾತಿನ ಚಕಮಕಿ ಉಂಟಾಗಿ, ಪ್ರಾಧ್ಯಾಪಕರು ತರಗತಿಯಿಂದ ಹೊರಬಂದರು. ಬಳಿಕ ಪರಿಸ್ಥಿತಿ ಉಲ್ಬಣಗೊಂಡಿದ್ದು, ಹೊರಗಡೆ ವಿದ್ಯಾರ್ಥಿಗಳು ಅವರನ್ನು ಎದುರಿಸಿ ತಳ್ಳಾಟ-ಹೊಡೆದಾಟ ನಡೆಸಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಕಾಲೇಜು ಪ್ರಾಂಶುಪಾಲ ಡಾ. ದಿವಾಕರ್ ಎಸ್.ವಿ. ನೀಡಿದ ದೂರಿನ ಮೇರೆಗೆ, ಮಹಿಳಾ ವಿದ್ಯಾರ್ಥಿಗಳು ಪ್ರಾಧ್ಯಾಪಕರ ವಿರುದ್ಧ ಲೈಂಗಿಕ ಕಿರುಕುಳ ಹಾಗೂ ಅನುಚಿತ ವರ್ತನೆ ಆರೋಪಗಳನ್ನು ಮಾಡಿದ್ದಾರೆ. ತನಿಖೆ ನಡೆಯುವವರೆಗೆ ಕ್ಯಾಂಪಸ್ಗೆ ಪ್ರವೇಶಿಸದಂತೆ ಸೂಚನೆ ನೀಡಿದ್ದರೂ, ಅವರು ಮತ್ತೆ ಕಾಲೇಜಿಗೆ ಬಂದು ವಿದ್ಯಾರ್ಥಿನಿಯ ಕೈ ಹಿಡಿದಿರುವುದಾಗಿ ಆರೋಪಿಸಲಾಗಿದೆ.
ಈ ಹಿನ್ನೆಲೆಯಲ್ಲಿ ನೆಲಮಂಗಲ ಗ್ರಾಮೀಣ ಪೊಲೀಸರು ಪ್ರಾಧ್ಯಾಪಕರ ವಿರುದ್ಧ ಪ್ರಕರಣ ದಾಖಲಿಸಿದ್ದು, ಮಹಿಳೆಯ ಘನತೆಗೆ ಧಕ್ಕೆ, ಅನಪೇಕ್ಷಿತ ಲೈಂಗಿಕ ವರ್ತನೆ ಹಾಗೂ ಕ್ರಿಮಿನಲ್ ಅತಿಕ್ರಮಣ ಸೇರಿದಂತೆ ಹಲವು ಆರೋಪಗಳಡಿ ತನಿಖೆ ಮುಂದುವರಿಸಿದ್ದಾರೆ. ಇದೇ ವೇಳೆ, ಕಾಲೇಜು ಆಡಳಿತ ಮಂಡಳಿ ತಕ್ಷಣ ಕ್ರಮ ಕೈಗೊಂಡು ಪ್ರಾಧ್ಯಾಪಕರನ್ನು ಸೇವೆಯಿಂದ ವಜಾಗೊಳಿಸಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.