ನವದೆಹಲಿ, ಮಾ. 27 (DaijiworldNews/TA): ಈ ವರ್ಷ ರಾಮನವಮಿ ಹಬ್ಬ ಅಯೋಧ್ಯೆಯಲ್ಲಿ ಅಪೂರ್ವ ಹಾಗೂ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು. ದೇವಾಲಯ ಸಂಕೀರ್ಣದಾದ್ಯಂತ “ಜೈ ಶ್ರೀ ರಾಮ್” ಘೋಷಣೆಗಳು ಮೊಳಗುತ್ತಿದ್ದಂತೆಯೇ, ಬಾಲರಾಮನ ಹಣೆಗೆ ಸೂರ್ಯನ ಕಿರಣಗಳು ತಿಲಕ ಇಟ್ಟವು. ಈ ಅದ್ಭುತ ಕ್ಷಣವನ್ನು ಪ್ರಧಾನಿ ನರೇಂದ್ರ ಮೋದಿ ಕಣ್ತುಂಬಿಕೊಂಡರು.

ಈ ವಿಶೇಷ ವ್ಯವಸ್ಥೆಯನ್ನು ರೂಪಿಸಲು ತಿಂಗಳುಗಳ ಕಾಲ ವೈಜ್ಞಾನಿಕ ಸಂಶೋಧನೆ ನಡೆಸಲಾಗಿತ್ತು. ಕೇಂದ್ರೀಯ ಕಟ್ಟಡ ಸಂಶೋಧನಾ ಸಂಸ್ಥೆ ಹಾಗೂ ಬೆಂಗಳೂರಿನ ತಜ್ಞರು ಜಂಟಿಯಾಗಿ ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದಾರೆ. ಪ್ರಾಣ ಪ್ರತಿಷ್ಠೆಯ ಬಳಿಕ ಇದು ಎರಡನೇ ಬಾರಿ ಬಾಲರಾಮನ ಹಣೆಗೆ ಸೂರ್ಯ ತಿಲಕ ಬಿದ್ದಿರುವುದು ವಿಶೇಷವಾಗಿದೆ. ತಿಲಕದ ನಂತರ ರಾಮಲಲ್ಲಾಗೆ 56 ವಿಧದ ಭಕ್ಷ್ಯಗಳನ್ನು ಅರ್ಪಿಸಲಾಯಿತು. ಬೆಳಗ್ಗೆ 5.30ಕ್ಕೆ ವಿಶೇಷ ಆರತಿ ನಡೆದಿದ್ದು, ದೇವರಿಗೆ ಹಳದಿ ವಸ್ತ್ರ ಧರಿಸಲಾಯಿತು.
ಭಕ್ತರ ಅನುಕೂಲಕ್ಕಾಗಿ ದರ್ಶನ ಸಮಯವನ್ನು ವಿಸ್ತರಿಸಲಾಗಿದ್ದು, ಬೆಳಗ್ಗೆ 5ರಿಂದ ರಾತ್ರಿ 11ರವರೆಗೆ, ಅಂದರೆ 18 ಗಂಟೆಗಳ ಕಾಲ ಭಕ್ತರಿಗೆ ದರ್ಶನದ ಅವಕಾಶ ನೀಡಲಾಗಿದೆ. ಇದಕ್ಕೂ ಮೊದಲು ದರ್ಶನ ಸಮಯ ಬೆಳಗ್ಗೆ 6.30ರಿಂದ ರಾತ್ರಿ 9.30ರವರೆಗೆ ಮಾತ್ರ ಇತ್ತು.
ರಾಮನವಮಿ ಹಿನ್ನೆಲೆಯಲ್ಲಿ ಸುಮಾರು 10 ಲಕ್ಷಕ್ಕೂ ಹೆಚ್ಚು ಭಕ್ತರು ರಾಮ ಜನ್ಮಭೂಮಿ ಸಂಕೀರ್ಣಕ್ಕೆ ಆಗಮಿಸಿದ್ದು, ರಾಮ ಪಥ, ಭಕ್ತಿ ಪಥ ಹಾಗೂ ಜನ್ಮಭೂಮಿ ಪಥಗಳಲ್ಲಿ ಭಾರೀ ಜನಸಂದಣಿ ಕಂಡುಬಂದಿದೆ. ಉದ್ದನೆಯ ಸರತಿ ಸಾಲುಗಳು ನಿರ್ಮಾಣವಾಗಿದ್ದು, ಭಕ್ತಿಭಾವದ ವಾತಾವರಣವು ಸಂಪೂರ್ಣ ಪ್ರದೇಶವನ್ನು ಆವರಿಸಿದೆ.