ಮುಂಬೈ, ಮಾ. 27 (DaijiworldNews/AA): ಡಾಲರ್ ಎದುರು ರೂಪಾಯಿ ಮೌಲ್ಯ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಇಂದು ಮಾರುಕಟ್ಟೆ ವಹಿವಾಟು ಆರಂಭವಾಗುತ್ತಿದ್ದಂತೆ ಒಂದೇ ದಿನ ಕುಸಿತ ಕಂಡು ಪ್ರತಿ ಡಾಲರ್ಗೆ 94.73 ರೂ.ಗಳ ಕನಿಷ್ಠ ಮಟ್ಟಕ್ಕೆ ಕುಸಿತಕಂಡಿದೆ.

ಬುಧವಾರ 94.23 ರಷ್ಟಿದ್ದ ರೂಪಾಯಿ ಮೌಲ್ಯ, ಏಕಾಏಕಿ ಕನಿಷ್ಠ ಮಟ್ಟಕ್ಕೆ ಕುಸಿದಿರುವುದು ಹೂಡಿಕೆದಾರರಲ್ಲಿ ಆತಂಕ ಸೃಷ್ಟಿಸಿದೆ. ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ನಮ್ಮ ರೂಪಾಯಿ ಮೌಲ್ಯ ಕುಸಿಯಲು ಕಾರಣ ಎಂದು ಹೇಳಲಾಗುತ್ತಿದೆ.
ಗಲ್ಫ್ ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಕಾರಣ ಇಂಧನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಬಹುದು ಎಂಬ ಭಯ ಜಾಗತಿಕ ಮಾರುಕಟ್ಟೆಯನ್ನು ನಡುಗಿಸುತ್ತಿದೆ. ಭಾರತವು ಅತಿಹೆಚ್ಚು ತೈಲ ಆಮದು ಮಾಡಿಕೊಳ್ಳುವುದರಿಂದ, ತೈಲ ಬೆಲೆ ಏರಿಕೆಯಾದಾಗ ನಾವು ಹೆಚ್ಚಿನ ಡಾಲರ್ಗಳನ್ನು ಪಾವತಿಸಬೇಕಾಗುತ್ತದೆ. ಇದರಿಂದ ನಮ್ಮ ವಿದೇಶಿ ವಿನಿಮಯ ಮೀಸಲು ಕರಗುತ್ತಿದ್ದು, ರೂಪಾಯಿ ದುರ್ಬಲವಾಗುತ್ತಿದೆ.