ಮೈಸೂರು, ಆ.06(Daijiworld News/SS): ಜಮ್ಮು ಕಾಶ್ಮೀರಕ್ಕಿದ್ದ 370, 35ಎ ವಿಧಿ ರದ್ದು ಮಾಡಿದ ಕೇಂದ್ರದ ನಿರ್ಧಾರ ಸ್ವಾಗತಾರ್ಹ ಎಂದು ಉಡುಪಿ ಪೇಜಾವರ ಶ್ರೀವಿಶ್ವೇಶತೀರ್ಥ ಶ್ರೀಪಾದರು ಹೇಳಿದ್ದಾರೆ.
ದೇಶದಲ್ಲಿರುವ ಕೆಲ ರಾಜ್ಯಕ್ಕೆ ಹೆಚ್ಚಿನ ಸ್ವಾತಂತ್ರ್ಯ, ಮತ್ತೆ ಕೆಲ ರಾಜ್ಯಕ್ಕೆ ಕಡಿಮೆ ಆಗಬಾರದು. ಎಲ್ಲಾ ರಾಜ್ಯಗಳಂತೆ ಕಾಶ್ಮೀರವನ್ನೂ ಸಮಾನವಾಗಿ ನೋಡುವ ಕ್ರಮ ಒಳ್ಳೇದು. ಇದರಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಪ್ರತಿ ರಾಜ್ಯವೂ ಸ್ವಾತಂತ್ರ್ಯಕ್ಕಾಗಿ ಬೇಡಿಕೆಯಿಟ್ಟು ಪ್ರತ್ಯೇಕವಾಗುವ, ರಾಷ್ಟ್ರದ ಏಕತೆಗೆ ಭಂಗವಾಗುವ ಅಪಾಯವಿದೆ ಎಂದು ಹೇಳಿದರು.
ರಾಷ್ಟ್ರದ ಎಲ್ಲಾ ರಾಜ್ಯಗಳಿಗೂ ಏಕರೂಪ ಶಾಸನದ ದೃಷ್ಟಿಯಿಂದ ಕೇಂದ್ರ ತೆಗೆದುಕೊಂಡಿರುವ ನಿರ್ಧಾರದಲ್ಲಿ ತಪ್ಪಿಲ್ಲ. ಎಲ್ಲಾ ರಾಜ್ಯಗಳಿಗೂ ಏಕರೂಪದ ಶಾಸನವಿರಬೇಕು. ಕಾಶ್ಮೀರದಲ್ಲಿ ಹಿಂಸೆ, ಹತ್ಯಾಕಾಂಡ ನಡೆಯದಂತೆ ಎಚ್ಚರ ವಹಿಸಬೇಕು. ಕಾಶ್ಮೀರದ ಹಿಂದೂಗಳು, ಮುಸಲ್ಮಾನರು ಎಲ್ಲರನ್ನೂ ಸಮಾನವಾಗಿ ಕಾಣಬೇಕು ಎಂದು ಹೇಳಿದರು.
ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸುವ, ಉತ್ತಮವಾಗಿ ರಾಷ್ಟ್ರ ಮುನ್ನಡೆಸುವ ಜಾಣ್ಮೆ ಪ್ರಧಾನಿಗಿದೆ ಎಂದು ಭಾವಿಸಿದ್ದೇವೆ. ನೂತನ ಶಾಸನಕ್ಕೆ ಪ್ರಧಾನಿ, ಗೃಹ ಸಚಿವರಿಗೆ ಅಭಿನಂದನೆ ಸಲ್ಲಿಸುತ್ತಿದ್ದು, ಜಮ್ಮು ಕಾಶ್ಮೀರದಲ್ಲಿ ಶಾಂತಿ ಸ್ಥಾಪನೆಗೆ ವಿಶೇಷ ಗಮನವನ್ನು ಕೇಂದ್ರ ಸರಕಾರ ನೀಡಲಿ ಎಂದು ಹೇಳಿದ್ದಾರೆ.