ಬೆಂಗಳೂರು, ಆ.06(Daijiworld News/SS): ರಾಜ್ಯ ಸರ್ಕಾರ ಮತ್ತೆ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ರಾಜ್ಯ ಅಪರಾಧ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಎಂ. ಅಬ್ದುಲ್ ಸಲೀಂ ಸೇರಿದಂತೆ 10 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿರುವ ಸರ್ಕಾರ, ಪೊಲೀಸ್ ಇಲಾಖೆಯಲ್ಲಿ ಭಾರಿ ಬದಲಾವಣೆ ಮಾಡಿದೆ.
ಆಡಳಿತ ವಿಭಾಗದ ಎಡಿಜಿಪಿಯಾಗಿರುವ ಡಾ.ಎ.ಪರಶಿವಮೂರ್ತಿ ಅವರನ್ನು ಬೆಂಗಳೂರು ಅಪರಾಧ ವಿಭಾಗದ ಎಡಿಜಿ ಮತ್ತು ಹೆಚ್ಚುವರಿ ಆಯುಕ್ತರಾಗಿ ವರ್ಗಾವಣೆಗೊಳಿಸಲಾಗಿದೆ. ಸಿಬಿ ಡಿಸಿಪಿ ಎಸ್. ಗಿರೀಶ್ ಅವರನ್ನು ಕೆಎಸ್ಆರ್ಪಿ 9ನೇ ಬೆಟಾಲಿಯನ್ನ ಕಮಾಂಡೆಂಟ್ ಆಗಿ ವರ್ಗಾಯಿಸಲಾಗಿದೆ. ಅವರ ಜಾಗಕ್ಕೆ ಕುಲದೀಪ್ಕುಮಾರ್ ಜೈನ್ ಅವರನ್ನು ನೇಮಕ ಮಾಡಲಾಗಿದೆ.
ಪೊಲೀಸ್ ಪಡೆ ಮುಖ್ಯಸ್ಥರಾಗಿ ಮೊನ್ನೆಯಷ್ಟೇ ವರ್ಗಾವಣೆಯಾಗಿದ್ದ ಬಿ.ಆರ್. ರವಿಕಾಂತೇಗೌಡ ಅವರನ್ನು ಬೆಂಗಳೂರು ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಆಗಿ ನೇಮಿಸಲಾಗಿದೆ. ಈ ಸ್ಥಾನದಲ್ಲಿದ್ದ ಪಿ.ಹರಿಶೇಖರನ್ ಅವರನ್ನು ಕೆಎಸ್ಆರ್ಪಿ ಐಜಿಪಿ ಆಗಿ ವರ್ಗಾಯಿಸಲಾಗಿದೆ.
ಅಪರಾಧ ವಿಭಾಗದ ಎಡಿಜಿಯಾಗಿದ್ದ ಡಾ.ಎಂ.ಅಬ್ದುಲ್ ಸಲೀಂ ಅವರನ್ನು ಆಡಳಿತ ವಿಭಾಗದ ಹೆಚ್ಚುವರಿ ಮಹಾನಿರ್ದೇಶಕರಾಗಿ ವರ್ಗಾಯಿಸಲಾಗಿದೆ. ಜತೆಗೆ ಹೆಸರಾಂತ ಪೋಲೀಸ್ ಅಧಿಕಾರಿ ರವಿ ಡಿ. ಚೆನ್ನಣ್ಣನವರ್ ಅವರನ್ನು ಬೆಂಗಳುರು ಗ್ರಾಮಾಂತರ ಜಿಲ್ಲಾ ಪೋಲೀಸ್ ಅವರ್ಷ್ಟಾಧಿಕಾರಿಯಾಗಿ ನೇಮಿಸಲಾಗಿದೆ.