ನವದೆಹಲಿ, ಮಾ. 30 (DaijiworldNews/TA): ಯುಪಿಎಸ್ಸಿ ನಾಗರಿಕ ಸೇವೆಗಳ ಪರೀಕ್ಷೆ ದೇಶದಲ್ಲೇ ಅತ್ಯಂತ ಕಠಿಣ ಪರೀಕ್ಷೆಗಳಲ್ಲೊಂದು ಎಂದು ಪರಿಗಣಿಸಲಾಗುತ್ತದೆ. ಪ್ರತಿವರ್ಷ ಲಕ್ಷಾಂತರ ಅಭ್ಯರ್ಥಿಗಳು ಈ ಪರೀಕ್ಷೆಗೆ ಹಾಜರಾಗುತ್ತಾರೆ, ಆದರೆ ಯಶಸ್ಸು ಸಾಧಿಸುವವರು ಕೆಲವರಷ್ಟೇ. ಇಂತಹ ಸವಾಲಿನ ಪರೀಕ್ಷೆಯಲ್ಲಿ ರಾಜಸ್ಥಾನದ ಅಲ್ವಾರ್ ಮೂಲದ ಲಘಿಮಾ ತಿವಾರಿ ಅವರು ಯಾವುದೇ ಕೋಚಿಂಗ್ ಇಲ್ಲದೇ ತಮ್ಮ ಮೊದಲ ಪ್ರಯತ್ನದಲ್ಲೇ ಅಖಿಲ ಭಾರತ 19ನೇ ರ್ಯಾಂಕ್ ಗಳಿಸಿ ಸ್ಪೂರ್ತಿದಾಯಕ ಸಾಧನೆ ಮಾಡಿದ್ದಾರೆ.

ಆಳ್ವಾರ್ ಮೂಲದ ಲಘಿಮಾ ತಿವಾರಿ, ದೆಹಲಿ ತಾಂತ್ರಿಕ ವಿಶ್ವವಿದ್ಯಾಲಯದಿಂದ ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ಎಂಜಿನಿಯರಿಂಗ್ನಲ್ಲಿ ಪದವಿ ಪಡೆದಿದ್ದಾರೆ. 2021ರಲ್ಲಿ ತಮ್ಮ ವಿದ್ಯಾಭ್ಯಾಸ ಪೂರ್ಣಗೊಳಿಸಿದ ಬಳಿಕ, ಅವರು ಸಂಪೂರ್ಣವಾಗಿ ಯುಪಿಎಸ್ಸಿ ತಯಾರಿಗೆ ತೊಡಗಿಕೊಂಡರು.
ಸುಮಾರು ಒಂದು ವರ್ಷದ ಕಾಲ ಅವರು ನಿಯಮಿತ ಹಾಗೂ ಶಿಸ್ತುಬದ್ಧ ಅಧ್ಯಯನ ನಡೆಸಿ ಸ್ಪಷ್ಟವಾದ ತಂತ್ರ ರೂಪಿಸಿಕೊಂಡರು. ಯೂಟ್ಯೂಬ್ನಲ್ಲಿ ಟಾಪರ್ಗಳ ಸಂದರ್ಶನಗಳನ್ನು ವೀಕ್ಷಿಸುವ ಮೂಲಕ ತಯಾರಿಯ ದಿಕ್ಕು ಹಾಗೂ ವಿಧಾನಗಳನ್ನು ಅರಿತುಕೊಂಡರು. ಸಾಮಾನ್ಯ ಅಧ್ಯಯನ, ಐಚ್ಛಿಕ ವಿಷಯ ಹಾಗೂ ಪ್ರಚಲಿತ ವಿದ್ಯಮಾನಗಳ ಮೇಲೆ ಸಮತೋಲನದಿಂದ ಗಮನಹರಿಸಿದರು.
ಲಘಿಮಾ ಯಾವುದೇ ತರಬೇತಿ ಸಂಸ್ಥೆಗೆ ಸೇರ್ಪಡೆಯಾಗದೆ, ಸ್ವಯಂ ಅಧ್ಯಯನ ಮತ್ತು ಟೆಸ್ಟ್ ಸೀರೀಸ್ಗಳನ್ನೇ ಪ್ರಮುಖ ಸಾಧನಗಳಾಗಿ ಬಳಸಿಕೊಂಡರು. ನಿಯಮಿತ ಅಭ್ಯಾಸ, ಅಣಕು ಪರೀಕ್ಷೆಗಳು ಹಾಗೂ ಪುನರವಲೋಕನವೇ ಅವರ ಯಶಸ್ಸಿನ ಕೀಲಿಕೈ ಎಂದು ಅವರು ಹೇಳಿದ್ದಾರೆ.
ತಮ್ಮ ಅನುಭವ ಹಂಚಿಕೊಂಡಿರುವ ಲಘಿಮಾ, ಯುಪಿಎಸ್ಸಿ ತಯಾರಿಯಲ್ಲಿ ಸ್ಥಿರತೆ ಅತ್ಯಂತ ಮುಖ್ಯ ಎಂದು ಸಲಹೆ ನೀಡುತ್ತಾರೆ. ಪ್ರತಿದಿನ ಸ್ವಲ್ಪ ಸಮಯವಾದರೂ ನಿಯಮಿತವಾಗಿ ಓದಬೇಕು, ಆಗಾಗ್ಗೆ ರಿವಿಷನ್ ಮಾಡಬೇಕು ಎಂದು ಅವರು ಹೇಳುತ್ತಾರೆ. ಪ್ರಿಲಿಮ್ಸ್ ನಂತರ ಸಮಯ ವ್ಯರ್ಥ ಮಾಡದೆ ತಕ್ಷಣ ಮೇನ್ಸ್ ತಯಾರಿಗೆ ಮುಂದಾಗಬೇಕು ಎಂಬುದು ಅವರ ಮತ್ತೊಂದು ಮುಖ್ಯ ಸಲಹೆ.
ಯುಪಿಎಸ್ಸಿ ಮೇನ್ಸ್ ಪರೀಕ್ಷೆಗೆ ಅವರು ಮಾನವಶಾಸ್ತ್ರವನ್ನು ಐಚ್ಛಿಕ ವಿಷಯವಾಗಿ ಆಯ್ಕೆ ಮಾಡಿಕೊಂಡರು. ಜೀವಶಾಸ್ತ್ರ ಹಿನ್ನೆಲೆಯಿದ್ದರೂ, ಹೊಸ ವಿಷಯವನ್ನು ಆಯ್ಕೆ ಮಾಡಿಕೊಂಡು ಅದರಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ಅವರು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ.
ತಮ್ಮ ಯಶಸ್ಸಿಗೆ ಪೋಷಕರು ಮತ್ತು ಕುಟುಂಬದ ಬೆಂಬಲವೇ ಮುಖ್ಯ ಕಾರಣ ಎಂದು ಲಘಿಮಾ ತಿವಾರಿ ತಿಳಿಸಿದ್ದಾರೆ. ತಮ್ಮ ಕುಟುಂಬದಿಂದ ನಾಗರಿಕ ಸೇವೆಗೆ ಸೇರುವ ಮೊದಲ ವ್ಯಕ್ತಿಯಾಗಿರುವುದು ಅವರ ಸಾಧನೆಯನ್ನು ಇನ್ನಷ್ಟು ವಿಶೇಷಗೊಳಿಸಿದೆ.