ಮೈಸೂರು, ಮಾ. 30 (DaijiworldNews/AA): ಒಣಗಿದ ದಾಸವಾಳ ಹೂ ನುಂಗಿ 6 ತಿಂಗಳ ಮಗು ಉಸಿರುಗಟ್ಟಿ ಸಾವನ್ನಪ್ಪಿದ ದಾರುಣ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ದೊಡ್ಡ ಹೆಜ್ಜೂರು ಗ್ರಾಮದಲ್ಲಿ ಸಂಭವಿಸಿದೆ.

ದೊಡ್ಡಹೆಜ್ಜೂರಿನ ಸುದರ್ಶನ್-ನವ್ಯ ದಂಪತಿಯ ಎರಡನೇ ಪುತ್ರ ಆರೂವರೆ ತಿಂಗಳ ಚಿನ್ಮಯಿಗೌಡ ಸಾವನ್ನಪ್ಪಿದ ಮಗು.
ತನ್ನ ಅಣ್ಣನೊಂದಿಗೆ ಆಟವಾಡುತ್ತಿದ್ದ ಚಿನ್ಮಿಯಿಗೌಡ, ಮನೆಯ ಹೊಸಲಿನಲ್ಲಿ ಪೂಜೆಗೆ ಇರಿಸಿದ್ದ ದಾಸವಾಳದ ಹೂವಿನ ತುಂಡನ್ನು ಬಾಯಿಗೆ ಹಾಕಿಕೊಂಡಿದೆ. ಈ ವೇಳೆ ಅಣ್ಣ ಕಿತ್ತುಕೊಳ್ಳುತ್ತಾನೆಂದು ಮಗು ಒಣಗಿದ ಹೂವನ್ನು ನುಂಗಿದ್ದರಿಂದ ಉಸಿರಾಟದ ತೊಂದರೆಯಾಗಿ ಅಸ್ವಸ್ಥಗೊಂಡಿದೆ.
ತಕ್ಷಣವೇ ಮಗುವನ್ನು ಹನಗೋಡಿನ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಮಗು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದೆ.