ಬೆಂಗಳೂರು, ಆ.06(Daijiworld News/SS): ನಾನು ರಾಜ್ಯದ ಮುಖ್ಯಮಂತ್ರಿಯಾಗಿದ್ದ ವೇಳೆ ನಿಗಮ ಮತ್ತು ಮಂಡಳಿಗಳಿಗೆ ನೇಮಕವಾಗಿದ್ದ ಶಾಸಕರು ಸೇರಿ ಎಲ್ಲರಿಗೂ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಕರ್ನಾಟಕದ ಮುಖ್ಯಮಂತ್ರಿಯಾಗಿ 14 ತಿಂಗಳು ನಾನು ಕಾಂಗ್ರೆಸ್ ಪಕ್ಷದ ಜೀತದಾಳುವಿನಂತೆ ದುಡಿದೆ. ಆದರೂ, ಸರ್ಕಾರ ಪತನಕ್ಕೆ ಎಲ್ಲರೂ ನನ್ನತ್ತಲೇ ಬೊಟ್ಟು ಮಾಡುತ್ತಿದ್ದಾರೆ. ಸರ್ಕಾರ ಪತನಗೊಳ್ಳಲು ನಾನು ಕಾರಣ ಎಂದು ದೂರಲಾಗುತ್ತಿದೆ. ಆದರೆ ಇದಕ್ಕೆ ನಾನು ಕಾರಣನಲ್ಲ. ಆದರೂ ನನ್ನನ್ನು ದೂರುತ್ತಿರುವುದು ಏಕೆಂದು ಗೊತ್ತಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸಮ್ಮಿಶ್ರ ಸರ್ಕಾರ ರಚನೆಗೊಳ್ಳುವುದು ಬಹುತೇಕ ಕಾಂಗ್ರೆಸ್ ನಾಯಕರಿಗೆ ಅದರಲ್ಲೂ ವಿಶೇಕ್ಷವಾಗಿ ಸ್ಥಳೀಯ ಕಾಂಗ್ರೆಸ್ ಮುಖಂಡರಿಗೆ ಇಷ್ಟವಿರಲಿಲ್ಲ. ಇವರೆಲ್ಲರ ವಿರೋಧದ ಹೊರತಾಗಿಯೂ ಕಾಂಗ್ರೆಸ್ ಹೈಕಮಾಂಡ್ ಜೆಡಿಎಸ್ನೊಂದಿಗೆ ಸಮ್ಮಿಶ್ರ ಸರ್ಕಾರ ರಚಿಸಲು ಆಸಕ್ತಿ ತೋರಿ, ಜೆಡಿಎಸ್ಗೆ ಸಂಪೂರ್ಣ ಬೆಂಬಲ ನೀಡಿದ್ದರು ಎಂದು ಹೇಳಿದರು.
ದೋಸ್ತಿ ಸರ್ಕಾರ ರಚನೆಯ ಬಗ್ಗೆ ಇಷ್ಟವಿಲ್ಲದಿದ್ದ ಕಾಂಗ್ರೆಸ್ ನಾಯಕರು ಸರ್ಕಾರ ರಚನೆಗೊಂಡ ಮೊದಲ ದಿನದಿಂದಲೂ ಹೇಗೆಲ್ಲ ನಡೆದುಕೊಂಡರು ಎಂಬುದು ಗುಟ್ಟಾಗಿ ಉಳಿದಿಲ್ಲ ಎಂದು ತಿಳಿಸಿದರು.