ಬೆಳಗಾವಿ,ಆ.06 (Daijiworld News/RD): ಭಾರಿ ಮಳೆಯಿಂದಾಗಿ ಕೊಲ್ಲಾಪುರ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಭಾರಿ ಪ್ರಮಾಣದ ಭೂಕುಸಿತ ಉಂಟಾಗಿದೆ. ಇದರಿಂದಾಗಿ ಪುಣೆ ಬೆಂಗಳೂರು ರಸ್ತೆ ಸಂಪರ್ಕ ಮಂಗಳವಾರ ಮಧ್ಯಾಹ್ನದವರೆಗೂ ಸ್ಥಗಿತಗೊಳಿಸಲಾಗಿದೆ.
ಬೆಂಗಳೂರಿನಿಂದ ಬೆಳಗಾವಿ ಮಾರ್ಗವಾಗಿ ಪುಣೆಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಇದಾಗಿದ್ದು, ಬೆಳಗಾವಿಯಿಂದ ಕೊಲ್ಲಾಪುರ ಕಡೆಗೆ ಯಾರು ಪ್ರಯಾಣ ಮಾಡದಂತೆ ಉತ್ತರ ಐಜಿಪಿ ರಾಘವೇಂದ್ರ ಸುಹಾಸ್ ಮನವಿ ಮಾಡಿದ್ದಾರೆ. ಸೋಮವಾರ ಸಂಜೆಯಿಂದಲೇ ರಾಜ್ಯದ ಗಡಿಯಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ ಎಂದು ಬೆಳಗಾವಿ ಪೊಲೀಸರು ತಿಳಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ಎಡೆಬಿಡದೆ ಸುರಿಯತ್ತಿರುವ ಮಳೆಯಿಂದಾಗಿ ರಸ್ತೆಯು ಕೂಡ ಬಿರುಕುಗೊಂಡು ಭಾರೀ ಪ್ರಮಾಣದಲ್ಲಿ ಭೂಕುಸಿತ ಉಂಟಾಗಿದ್ದು, ಅಪಾಯದ ಸ್ಥಿತಿ ಎದುರಾಗಿದೆ.