ಬೆಂಗಳೂರು, ಆ 06 (Daijiworld News/MSP): ಬಕ್ರೀದ್ ಹಬ್ಬದ ಆಚರಣೆಗೆ ಸೂಕ್ತ ರಕ್ಷಣೆ ಕೋರಿ, ಹಾಗೂ ಪ್ರಾಣಿ ಸಾಗಾಟ ಮಾಡಲು ಅನುಮತಿ ನೀಡುವಂತೆ ಕೋರಿ ಅಲ್ಪಸಂಖ್ಯಾತ ಸಮುದಾಯದ ಶಾಸಕ ಹಾಗೂ ವಿಧಾನ ಪರಿಷತ್ ನ ಸದಸ್ಯರು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಶಾಸಕ ತನ್ವೀರ್ ಸೇಠ್, ಜಮೀರ್ ಅಹ್ಮದ್ ಖಾನ್ , ರಹೀಂ ಖಾನ್, ಖನೀಜ್ ಫಾತೀಮಾ, ಎಮ್.ಎ ಹ್ಯಾರೀಸ್ , ವಿಧಾನ ಪರಿಷತ್ ಸದಸ್ಯರಾದ ಸಿ.ಎಂ ಇಬ್ರಾಹಿಂ, ನಸೀರ್ ಅಹ್ಮದ್, ರಿಜ್ವಾನ್ ಅರ್ಶದ್, ಅಬ್ದುಲ್ ಜಬ್ಬಾರ್ ಮನವಿ ನೀಡಿದ್ದಾರೆ. ಸಿಎಂ ಇದಕ್ಕೆ ಸ್ಪಂದಿಸಿ ಈ ಬಗ್ಗೆ ರಾಜ್ಯಪೊಲೀಸ್ ಮಹಾನಿರ್ದೇಶಕರು ಗಮನ ಹರಿಸುವಂತೆ ತಿಳಿಸಿದ್ದಾರೆ.
ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದವರು 1400 ಸಾಲಿನ ಹಿಂದಿನಿಂದಲೂ ಬಕ್ರೀದ್ ಹಬ್ಬವನ್ನು ಆಚರಿಸಿಕೊಂಡು ಬರುತ್ತಿದ್ದು, ಈ ಹಬ್ಬವು ಮುಸ್ಲಿಂ ಸಮುದಾಯದ ಪವಿತ್ರವಾದ ಹಬ್ಬವಾಗಿರುತ್ತದೆ. ಈ ಹಬ್ಬದ ದಿನದಂದು ಎಲ್ಲಾ ಮುಸ್ಲಿಂ ಸಮುದಾಯದವರು ಅವರ ಸಾಮರ್ಥ್ಯಕ್ಕೆ ತಕ್ಕಂತೆ ದೇವರ ಹೆಸರಿನಲ್ಲಿ ಬಲಿಯನ್ನು ನೀಡಿ, ಅದನ್ನು ಬಡ ವರ್ಗದವರಿಗೆ ದಾನವಾಗಿ ನೀಡುತ್ತಾ ಬಂದಿರುತ್ತಾರೆ. ಇದು ದಶಕಗಳಿಂದ ಪರಂಪರೆಯಾಗಿ ನಡೆದುಕೊಂಡು ಬಂದಿರುತ್ತದೆ, ಹಾಗೂ ಎಲ್ಲಾ ಮುಸ್ಲಿಂ ಸಮುದಾಯದವರು ಇದನ್ನು ಆಚರಿಸಲೇ ಬೇಕಾಗಿರುತ್ತದೆ.
ಆದುದರಿಂದ ತಾವು ಆಗಸ್ಟ್ 12 ರಂದು ಕರ್ನಾಟಕ ರಾಜ್ಯದಾದ್ಯಂತ ನಡೆಯುತ್ತಿರುವ ಸಂದರ್ಭದಲ್ಲಿ ಪ್ರಾಣಿಗಳನ್ನು ವಾಹನದಲ್ಲಿ ಸಾಗಿಸಲು ಅಡಚಣೆ ಮಾಡದಂತೆ ಹಾಗೂ ಈ ಹಬ್ಬವನ್ನು ಸುಗಮವಾಗಿ ನಡೆಸಲು, ಅನುಕೂಲವಾಗುವಂತೆ ಪೊಲೀಸ್ ಇಲಾಖೆಗೆ ಮತ್ತು ಜಿಲ್ಲಾಡಳಿತದಿಂದ ಸೂಕ್ತ ರಕ್ಷಣೆ ನೀಡುವಂತೆ ಆದೇಶಿಸಲು ಕೋರುತ್ತೇವೆ ಎಂದು ಪತ್ರದಲ್ಲಿ ವಿನಂತಿಸಿಕೊಂಡಿದ್ದಾರೆ.