ಬೆಂಗಳೂರು, ಆ 06 (Daijiworld News/MSP): ಕಳೆದ 72 ವರ್ಷಗಳಿಂದಲೂ ಇದ್ದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿರುವ ಕೇಂದ್ರದ ನರೇಂದ್ರ ಮೋದಿ ಸರ್ಕಾರ, ಜಮ್ಮು ಮತ್ತು ಕಾಶ್ಮೀರದ ಕುರಿತಂತೆ ಐತಿಹಾಸಿಕ ನಿರ್ಧಾರವನ್ನು ಹಿರಿಯ ಸಾಹಿತಿ ಪ್ರೊ. ಕೆ.ಎಸ್.ಭಗವಾನ್ ಸ್ವಾಗತಿಸಿ ಮೋದಿಯನ್ನು ಅಚ್ಚರಿ ಎಂಬಂತೆ ಹೊಗಳಿದ್ದಾರೆ.
ಸವಿಂಧಾನದ 370 ವಿಧಿ ಮತ್ತು 35 ಎ ಪರಿಚ್ಚೇಧದಲ್ಲಿರುವ ವಿಶೇಷ ಸ್ಥಾನಮಾನದ ಎಲ್ಲಾ ಅಂಶಗಳನ್ನು ರದ್ದು ಮಾಡಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿಯವರನ್ನ ಕೆ.ಎಸ್.ಭಗವಾನ್ ಹೊಗಳಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡುವ ಮೂಲಕ ಕೇಂದ್ರ ಸರ್ಕಾರಕ್ಕೆ ಅಭಿನಂದನೆ ತಿಳಿಸಿದ್ದಾರೆ.
‘ಸುಮಾರು 72 ವರ್ಷಗಳ ಸಂಕಟದಲ್ಲಿ ನರಳುತ್ತಿದ್ದ ಕಾಶ್ಮೀರ ಜನತೆಯನ್ನು ನಮ್ಮ ನೆಚ್ಚಿನ ಪ್ರಧಾನ ಮಂತ್ರಿಯವರು ಆರ್ಟಿಕಲ್ 370, 35a ರದ್ದು ಮಾಡಿ ರಾಷ್ಟ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಸ ತಂದಿದ್ದಾರೆ. ವಿಶೇಷ ಸ್ಥಾನಮಾನವನ್ನು ರದ್ದು ಮಾಡಿ ಇಡೀ ದೇಶವನ್ನ ಒಂದೇ ಸಂವಿಧಾನದಡಿ ತಂದದ್ದು ಶ್ಲಾಘನೀಯ. ಮೋದಿ ಹೆಸರು ಇನ್ನು ಮುಂದೆ ಇತಿಹಾಸದಲ್ಲಿ ಅಜರಾಮರವಾಗಿ ಉಳಿಯುತ್ತದೆ ಎನ್ನಲು ಸಂತೋಷ ಮತ್ತು ಹೆಮ್ಮೆಯಾಗುತ್ತದೆ. "ಜೈ ನರೇಂದ್ರ ಮೋದಿ" ಎಂದು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.
ಬಿಜೆಪಿ ಹಾಗೂ ಆರ್ಎಸ್ಎಸ್ ಸಂಘ ಪರಿವಾರದ ವಿರುದ್ಧ ಕೆಂಡಕಾರಿ ಸದಾ ವಿವಾದಗಳಿಗೆ ಒಳಗಾಗುತ್ತಿದ್ದ ಭಗವಾನ್ ಇದೇ ಮೊತ್ತ ಮೊದಲ ಬಾರಿಗೆ ಪ್ರಧಾನಿ ಮೋದಿಯವನ್ನ ಹೊಗಳಿ ಹೇಳಿಕೆ ನೀಡಿದ್ದಾರೆ.