ಮುಂಬೈ, ಆ.07(Daijiworld News/SS): ಮಲೆನಾಡಿನ ಕಾಫಿಗೆ ವಿಶ್ವ ಮಾರುಕಟ್ಟೆ ತಂದುಕೊಟ್ಟು, ಕಾಫಿ ಬೆಳೆಗಾರರ ಬದುಕು ಬಂಗಾರವಾಗಿಸಿದ್ದ ಹಾಗೂ ಸಾವಿರಾರು ಗ್ರಾಮೀಣ ಯುವಕರಿಗೆ ಉದ್ಯೋಗದಾತರಾಗಿದ್ದ ಯಶಸ್ವಿ ಉದ್ಯಮಿ ವಿ.ಜಿ. ಸಿದ್ಧಾರ್ಥ ಅವರ ಅಕಾಲಿಕ ನಿಧನದ ಬಳಿಕ ಷೇರು ಮೌಲ್ಯ ಪತನದ ಹಾದಿ ಹಿಡಿದಿದೆ.
ಕಾಫಿ ಡೇ ಷೇರು ಮೌಲ್ಯದಲ್ಲಿ ಕುಸಿತ ಅವರ ಸಾವಿನ ನಂತರವೂ ಮುಂದುವರಿದಿದ್ದು, ಈವರೆಗೆ ಶೇ. 53ರಷ್ಟು ಕುಸಿತ ಕಂಡಿದೆ. ಜುಲೈ 31ರಂದು ಅವರ ಮೃತದೇಹ ನೇತ್ರಾವತಿ ನದಿಯಲ್ಲಿ ಪತ್ತೆಯಾದ ಬಳಿಕ ಷೇರುಮೌಲ್ಯ ಕುಸಿತ ನಿರಂತರವಾಗಿ ಮುಂದುವರಿದಿದೆ. ಕಂಪನಿಯಲ್ಲಿ ಹೂಡಿಕೆ ಮಾಡಿರುವ ಷೇರುದಾರರು ಈವರೆಗೆ 2167 ಕೋಟಿ ರೂ. ನಷ್ಟ ಅನುಭವಿಸಿದ್ದಾರೆ ಎಂದು ಹೇಳಲಾಗಿದೆ.
ಜುಲೈ 29ರಂದು 4067 ಕೋಟಿ ರೂ. ಇದ್ದ ಮಾರುಕಟ್ಟೆ ಬಂಡವಾಳ ಮಂಗಳವಾರ 1900 ಕೋಟಿ ರೂ.ಗೆ ಇಳಿಕೆ ಕಂಡಿದೆ. ಇನ್ನಷ್ಟು ದಿನ ಈ ಕುಸಿತ ಮುಂದುವರಿಯಬಹುದು ಎಂದು ಹೇಳಲಾಗುತ್ತಿದೆ. ಜು.29ರಂದು 191.75 ರೂ. ಇದ್ದ ಷೇರು ಮೌಲ್ಯ, ಮಂಗಳವಾರ 85ಕ್ಕೆ ಇಳಿಕೆಯಾಗಿದೆ ಎಂದು ತಿಳಿದುಬಂದಿದೆ.