ಬೆಂಗಳೂರು ಆ 07 (Daijiworld News/MSP): ಅಗಲಿದ ಸುಷ್ಮಾ ಸ್ವರಾಜ್ ಅವರಿಗೂ ಬಳ್ಳಾರಿಗೂ ಅವಿನಾಭ ಸಂಬಂಧ. 1999 ರ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಸೋನಿಯಾ ವಿರುದ್ಧ ಸ್ಪರ್ಧಿಸಿ ಚುನಾವಣೆಯಲ್ಲಿ ಕೆಲವೇ ಅಂತರಗಳ ಮತದಲ್ಲಿ ಸೋತಿದ್ದರೂ ಜನರ ಮನಸ್ಸು ಗೆದ್ದಿದ್ದರು.
ಅಚ್ಚರಿ ಎಂಬಂತೆ ಬಳ್ಳಾರಿಯಲ್ಲಿ ಅವರು ಚುನಾವಣಾ ಪ್ರಚಾರ ನಡೆಸಿದ್ದು ಕೇವಲ 18 ದಿನಗಳು. ಈ ಸಂದರ್ಭದಲ್ಲಿ ಅವರು ಕನ್ನಡವನ್ನು ಕಲಿತು ಅಟಲ್ ಬಿಹಾರಿ ವಾಜಪೇಯಿ ಸಮ್ಮುಖದಲ್ಲಿ ಸುದೀರ್ಘ ಭಾಷಣವನ್ನು ಕನ್ನಡದಲ್ಲೇ ಮಾಡಿ ಜನರ ಪ್ರೀತಿ ಗಳಿಸಿದ್ದರು.
ಸೋನಿಯಾ ಗಾಂಧಿ ವಿರುದ್ದ ಕಣಕ್ಕಿಳಿದಿದ್ದ ಅವರು ತಾವೇ ರಚಿಸಿದ್ದ "ವಿದೇಶಿ ಎದುರು ಸ್ವದೇಶಿ" ಎಂಬ ಸ್ಲೋಗನ್ ಅಡಿಯಲ್ಲಿ ಚುನಾವಣೆ ಎದುರಿಸಿದರು. 18 ದಿನಗಳ ಕಾಲ ಬಳ್ಳಾರಿಯಲ್ಲೇ ಇದ್ದು, ಚುನಾವಣೆ ಎದುರಿಸಿದ್ದರು.
ಅಗಾಧ ಪಾಂಡಿತ್ಯ, ಜನತೆಯೆಡೆಗೆ ಸೂಕ್ಷ್ಮ ಸಂವೇದನೆ, ಸ್ಪಂದನೆ ಹೊಂದಿದ್ದ ಅವರಿಗೆ ಕರ್ನಾಟಕದ ಅದರಲ್ಲೂ ಬಳ್ಳಾರಿಯ ನಾಡಿ ಮಿಡಿತ ಚೆನ್ನಾಗಿಯೇ ಅರ್ಥ ಮಾಡಿಕೊಂಡಿದ್ದರು. ಚುನಾವಣೆ ಮುಗಿಸಿ ಹಿಂತಿರುಗುವ ವೇಳೆ ತಾವು ಸೋತಿದ್ದರೂ ನೊಂದುಕೊಂಡಿದ್ದರೂ ಅಂದು ರಾಜಕೀಯ ಶಿಶುಗಳಂತಿದ್ದ ಜನಾರ್ಧನ್ ರೆಡ್ಡಿ ಹಾಗೂ ಶ್ರೀರಾಮು ಅವರು ಹೆಲಿಪ್ಯಾಡ್ ಹತ್ತಿರ ಕಣ್ಣೀರು ಸುರಿಸುತ್ತಿದುದನ್ನು ಕಂಡು ಹೆಲಿಕಾಪ್ಟರ್ ಇಳಿದು ಮತ್ತೆ ಅವರಿಬ್ಬರಲ್ಲೂ ಧೈರ್ಯ ತುಂಬಿ ಪ್ರತಿ ವರ್ಷ ಬಳ್ಳಾರಿಗೆ ಬರುವುದಾಗಿ ಮಾತು ಕೊಟ್ಟಿದ್ದರು. ಮಾತಿನಂತೆಯೇ 13 ವರ್ಷಗಳ ಕಾಲ ಬಳ್ಳಾರಿಗೆ ಬಂದು ವರಮಹಾಲಕ್ಷ್ಮೀ ಪೂಜೆಯಲ್ಲಿ ಪಾಲ್ಗೊಳ್ಳುತ್ತಿದ್ದರು.