ಹೊಸದಿಲ್ಲಿ, ಆ.07(Daijiworld News/SS): ಬ್ಯಾಂಕ್ ಸಿಬ್ಬಂದಿ ನೇಮಕಾತಿ ಸಂಸ್ಥೆ (ಐಬಿಪಿಎಸ್) ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಪ್ರೊಬೆಷನರಿ ಆಫೀಸರ್/ ಮ್ಯಾನೇಜ್ಮೆಂಟ್ ಟ್ರೇನಿ ಹುದ್ದೆಗಳ ನೇಮಕಕ್ಕೆ ಅಧಿಸೂಚನೆ ಹೊರಡಿಸಿದೆ.
9 ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಒಟ್ಟು 4,336 ಹುದ್ದೆಗಳನ್ನು ಭರ್ತಿ ಮಾಡಲು ಐಬಿಪಿಎಸ್ ಈ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸುತ್ತಿದ್ದು, ಆನ್ಲೈನ್ನಲ್ಲಿ ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ. ಐಬಿಪಿಎಸ್ನ ವೆಬ್ನಲ್ಲಿ ಇದಕ್ಕೆ ಲಿಂಕ್ ಒದಗಿಸಲಾಗಿದ್ದು, ಅರ್ಜಿ ಸಲ್ಲಿಸಲು ಆಗಸ್ಟ್ 28 ಕೊನೆಯ ದಿನವಾಗಿರುತ್ತದೆ.
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಆಗಸ್ಟ್ 07ರಿಂದ ಅವಕಾಶ ನೀಡಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಈ ವರ್ಷ 324 ಹೆಚ್ಚು ಹುದ್ದೆಗಳಿಗೆ ನೇಮಕ ನಡೆಯುತ್ತಿದೆ. 2018ರಲ್ಲಿ 4,102 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗಿತ್ತು. 2017ರಲ್ಲಿ 3,562 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಹೀಗಾಗಿ, ಕಳೆದ ಕೆಲವು ವರ್ಷಗಳಿಂದ ಕೆಲವು ನೂರು ಸಂಖ್ಯೆಯಲ್ಲಿ ಹುದ್ದೆಗಳ ಸಂಖ್ಯೆ ಹೆಚ್ಚುತ್ತಿದೆ.
ಹುದ್ದೆಗಳ ಪೈಕಿ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಿಗೆ 670 ಹುದ್ದೆಗಳು, ಪರಿಶಿಷ್ಟ ಪಂಗಡದವರಿಗೆ 299, ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 904 ಹುದ್ದೆಗಳು, ಆರ್ಥಿಕವಾಗಿ ಹಿಂದುಳಿದ ವರ್ಗದರಿಗೆ 432 ಹಾಗೂ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 2,031 ಹುದ್ದೆಗಳನ್ನು ಮೀಸಲಿಡಲಾಗಿದೆ.
ಅಂಗೀಕೃತ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಪಡೆದವರು ಬ್ಯಾಂಕುಗಳಲ್ಲಿನ ಈ ಆಫೀಸರ್ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವಾಗ ತಾವು ಪಡೆದ ಶೇಕಡವಾರು ಅಂಕಗಳು/ಅಂಕಪಟ್ಟಿಗಳನ್ನು ದಾಖಲಿಸಬೇಕಾಗುತ್ತದೆ. ಯಾವುದೇ ಪದವಿಯಾಗಿದ್ದರೂ 2019ರ ಆಗಸ್ಟ್ 28ರೊಳಗೆ ಅಂತಿಮ ಫಲಿತಾಂಶ ಪಡೆದಿದ್ದಲ್ಲಿ ಮಾತ್ರ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತದೆ.
ಅರ್ಜಿ ಸಲ್ಲಿಸಲು ಅಭ್ಯರ್ಥಿಗಳ ಕನಿಷ್ಠ ವಯಸ್ಸು 20 ವರ್ಷ ಹಾಗೂ ಗರಿಷ್ಠ 30 ವರ್ಷ. ಮೀಸಲಾತಿ ನಿಯಮಾನುಸಾರ ವಯೋಮಿತಿಯಲ್ಲಿ ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ ಐದು ವರ್ಷ, ಒಬಿಸಿ ವರ್ಗದವರಿಗೆ ಮೂರು ವರ್ಷ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷಗಳ ಸಡಿಲಿಕೆ ನೀಡಲಾಗುತ್ತದೆ.