ಹೊಸದಿಲ್ಲಿ, ಆ.07(Daijiworld News/SS): ಸುಷ್ಮಾ ಸ್ವರಾಜ್ ಅವರ ಹಠಾತ್ ನಿಧನಕ್ಕೆ ಬಿಜೆಪಿ ಹಿರಿಯ ನಾಯಕ, ರಾಜಕೀಯ ಭೀಷ್ಮ ಲಾಲ್ ಕೃಷ್ಣ ಅಡ್ವಾಣಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಸುಷ್ಮಾ ಅಗಲಿಕೆಯಿಂದ ದೇಶ ಅಪ್ರತಿಮ ನಾಯಕಿಯನ್ನು ಕಳೆದುಕೊಂಡಿದೆ. ನಾನು ಸುಷ್ಮಾ ಅವರನ್ನು ತುಂಬಾ ನೆನಪಿಸಿಕೊಳ್ಳಲಿದ್ದೇನೆ. ಅವರ ಅಗಲಿಕೆ ತೀರಾ ನೋವು ತಂದಿದೆ ಎಂದು ಅಡ್ವಾಣಿ ಹೇಳಿದ್ದಾರೆ.
ಅತ್ಯಂತ ಆಪ್ತ ಸಹೋದ್ಯೋಗಿಯಾಗಿಯಲ್ಲಿ ಒಬ್ಬರಾಗಿದ್ದ ಸುಷ್ಮಾ, 80ರ ದಶಕದಲ್ಲಿ ಪಕ್ಷಕ್ಕೆ ಸೇರಿದ್ದ ಯುವ ಪಡೆಯಲ್ಲಿ ಒಬ್ಬರಾಗಿದ್ದರು. ಅತ್ಯಂತ ಚುರುಕಿನ ಹೆಣ್ಣುಮಗಳಾಗಿದ್ದ ಅವರು, ಅತ್ಯಂತ ಕಡಿಮೆ ಸಮಯದಲ್ಲಿ ಪಕ್ಷದ ಪ್ರಮುಖ ನಾಯಕರ ಪಟ್ಟಿಯಲ್ಲಿ ಸೇರಿದ್ದರು. ಪಕ್ಷ ನಿಷ್ಠೆ ಹಾಗೂ ಕರ್ತವ್ಯದ ಕಡೆಗೆ ಅವರಿಗಿದ್ದ ಬದ್ಧತೆ ಎಲ್ಲರಿಗೂ ಮಾದರಿ. ಎಲ್ಲ ಮಹಿಳೆಯರಿಗೆ ಆಕೆ ಅನುಕರಣೀಯರು ಎಂದು ಹೇಳಿದ್ದಾರೆ.
ನನ್ನ ಅತ್ಯಂತ ಆಪ್ತರಲ್ಲಿ ಒಬ್ಬರಾಗಿದ್ದ ಸುಷ್ಮಾ ಸ್ವರಾಜ್ ಅವರ ಹಠಾತ್ ನಿಧನದಿಂದ ತೀವ್ರ ದುಃಖವಾಗಿದೆ. ವಾಗ್ಮಿ, ವಾಕ್ಚತುರೆಯಾಗಿದ್ದ ಅವರು, ವಿಚಾರಗಳನ್ನು ಅತ್ಯಂತ ಸ್ಪಷ್ಟ ಹಾಗೂ ಸ್ಫುಟವಾದ ಶಬ್ಧಗಳಿಂದ ತಿಳಿಸುವ ಶಕ್ತಿ ಹೊಂದಿದ್ದರು. ಬಿಜೆಪಿ ಅಧ್ಯಕ್ಷನಾಗಿದ್ದ ಸಮಯದಲ್ಲಿ ಅವರು ಬಿಜೆಪಿ ಸೇರಿ, ಆ ಬಳಿಕ ಪಕ್ಷಕ್ಕೆ ತೋರಿದ ನಿಷ್ಠೆ ಎಂದಿಗೂ ಅಜರಾಮರ ಎಂದು ನುಡಿದಿದ್ದಾರೆ.
ಬಿಜೆಪಿ ಹಿರಿಯ ನಾಯಕಿ, ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಹಠಾತ್ ನಿಧನ ಸುದ್ದಿ ಕೇಳಿ ದೇಶಾದ್ಯಂತ ಜನರಿಗೆ ಆಘಾತವನ್ನುಂಟುಮಾಡಿದೆ. ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದ ಸುಷ್ಮಾ ಸ್ವರಾಜ್ ಅವರ ನಿಧನಕ್ಕೆ ಅಪಾರ ಸಂಖ್ಯೆಯಲ್ಲಿ ಕಂಬನಿ ಮಿಡಿಯುತ್ತಿದ್ದಾರೆ.