ನವದೆಹಲಿ , ಆ 07 (Daijiworld News/MSP): ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅವರನ್ನೊಳಗೊಂಡ ಆರು ಸದಸ್ಯರ ಹಣಕಾಸು ನೀತಿ ಸಮಿತಿಯು ಬುಧವಾರ ರೆಪೋ ದರವನ್ನು ಶೇ.5.40ಕ್ಕೆ ಇಳಿಕೆ ಮಾಡುವ ಮೂಲಕ ಬಡ್ಡಿದರಗಳನ್ನು ಇಳಿಕೆ ಮಾಡಿದೆ. ಹೀಗಾಗಿ ಸತತ ನಾಲ್ಕನೇ ಬಾರಿ ರೆಪೋ ದರ ಕಡಿತಗೊಳಿಸಿದಂತಾಗಿದೆ. ಕಳೆದ ಒಂಬತ್ತು ವರ್ಷಗಳಲ್ಲಿಯೇ ಇದು ಅತ್ಯಂತ ಕಡಿಮೆ ರೆಪೋ ದರವಾಗಿದ್ದು, ಆರ್ಥಿಕ ಪ್ರಗತಿಗೆ ವೇಗ ನೀಡುವ ಉದ್ದೇಶ ಹೊಂದಿದೆ.
2019-20ನೇ ಸಾಲಿನ ಎರಡು ತಿಂಗಳ ಹಣಕಾಸು ನೀತಿಯ ಸಭೆಯ ನಂತರ ಆರ್ ಬಿಐ ರೆಪೋ ದರ ಕಡಿತಗೊಳಿಸಿರುವ ಬಗ್ಗೆ ಸ್ಪಷ್ಟಪಡಿಸಿದೆ.ಆರ್ಥಿಕ ಕುಸಿತದ ಹಿನ್ನೆಲೆಯಲ್ಲಿ ದೇಶದ ಆರ್ಥಿಕತೆಗೆ ಚೈತನ್ಯ ನೀಡಲು ಈ ನಿರ್ಧಾರ ಕೈಗೊಂಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಆರ್ ಬಿಐನ ಈ ಕ್ರಮದಿಂದಾಗಿ ಬ್ಯಾಂಕ್ ಗಳಲ್ಲಿ ಪಡೆಯುವ ಗೃಹ ಸಾಲ, ಕಾರುಗಳ ಸಾಲದ ಬಡ್ಡಿದರ ಕಡಿಮೆಯಾಗುವ ನಿರೀಕ್ಷೆ ಇದೆ. ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ನೇತೃತ್ವದ ಸಮಿತಿ ರೆಪೋ ದರವನ್ನು ಶೇ.0.35 ಬೇಸಿಸ್ ಪಾಯಿಂಟ್ಸ್ ಗಳಷ್ಟು ಇಳಿಕೆ ಮಾಡುವ ಮೂಲಕ ಶೇ.5.75ರಿಂದ ಶೇ.5.40ಕ್ಕೆ ಇಳಿಕೆ ಮಾಡಿದೆ.