ನವದೆಹಲಿ, ಆ 07 (Daijiworld News/MSP): ಅಗಲಿದ ಕೇಂದ್ರದ ಮಾಜಿ ವಿದೇಶಾಂಗ ಸಚಿವೆ ಹಾಗೂ ಬಿಜೆಪಿಯ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಅವರಿಗೆ ದೇಶಾದ್ಯಂತ ಅವರ ಅಭಿಮಾನಿಗಳು ತಮ್ಮದೇ ರೀತಿಯಲ್ಲಿ ಅಗಲಿದ ನಾಯಕಿಗೆ ಗೌರವ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದರೆ, ಅತ್ತಕಡೆ ನವದೆಹಲಿಯ ಬಿಜೆಪಿ ಮುಖ್ಯ ಕಚೇರಿಯಲ್ಲಿ ಸುಷ್ಮಾ ಸ್ವರಾಜ್ ಅವರ ಪಾರ್ಥಿವ ಶರೀರದ ಮೇಲೆ ರಾಷ್ಟ್ರಧ್ವಜ ಹಾಕಿ ಸರ್ಕಾರಿ ಗೌರವ ಸಲ್ಲಿಸಲಾಯಿತು.
ಇದಕ್ಕೂ ಮೊದಲು ಪಾರ್ಥಿವ ಶರೀರವನ್ನು ದೆಹಲಿಯ ಜನಪತ್ ರಸ್ತೆಯಲ್ಲಿರುವ ದವನ್ ದೀಪ್ ಬಿಲ್ಡಿಂಗ್ ನಲ್ಲಿ ಸಾರ್ವಜನಿಕರು ಪಾರ್ಥೀವ ಶರೀರದ ದರ್ಶನ ಪಡೆದರು. ಅಲ್ಲಿಂದ ಬಳಿಕ ಪಾರ್ಥಿವ ಶರೀರವನ್ನು ಬಿಜೆಪಿ ಕೇಂದ್ರ ಕಚೇರಿಗೆ ತೆಗೆದುಕೊಂಡು ಹೋಗಿ ಅಲ್ಲಿ ರಾಜಕೀಯ ನಾಯಕರು ಮತ್ತು ಇತರ ಗಣ್ಯರ ದರ್ಶನಕ್ಕೆ ವ್ಯವಸ್ಥೆ ಮಾಡಲಾಯಿತು.
ಇನ್ನು ಪಾರ್ಥಿವ ಶರೀರದ ಮೇಲೆ ರಾಷ್ಟ್ರಧ್ವಜ ಹಾಕಿ ಸರ್ಕಾರಿ ಗೌರವ ಈ ಸಂದರ್ಭ ಸುಷ್ಮಾ ಪತಿ ಸ್ವರಾಜ್ ಕೌಶಲ್ ಹಾಗೂ ಪುತ್ರಿ ಬನ್ಸುರಿ ಸ್ವರಾಜ್, ಸಲ್ಯೂಟ್ ಸಲ್ಲಿಸಿ ಭಾವುಕರಾದರು. ಆ ಬಳಿಕ ಬಿಜೆಪಿ ಕಚೇರಿಯಿಂದ ಲೋಧಿ ರಸ್ತೆಯಲ್ಲಿರುವ ವಿದ್ಯುತ್ ಚಿತಾಗಾರಕ್ಕೆ ಪಾರ್ಥಿವ ಶರೀರವನ್ನು ಕೊಂಡೊಯ್ಯಲಾಯಿತು. ಈ ವೇಳೆ ಬಿಜೆಪಿ ಕಾರ್ಯಾಧ್ಯಕ್ಷ ಜೆಪಿ ನಡ್ಡಾ, ಸಚಿವರಾದ ರಾಜನಾಥ್ ಸಿಂಗ್, ರವಿಶಂಕರ್ ಪ್ರಸಾದ್, ಪಿಯೂಶ್ ಗೋಯಲ್ ಹಾಗೂ ಇತರೆ ಬಿಜೆಪಿ ಮುಖಂಡರು ಪಾರ್ಥಿವ ಶರೀರಕ್ಕೆ ಹೆಗಲು ಕೊಡುವ ಮೂಲಕ ಪಕ್ಷಕ್ಕೆ ಸೇವೆ ಸಲ್ಲಿಸಿದ ಸುಷ್ಮಾ ಸ್ವರಾಜ್ ಅವರನ್ನು ಸ್ಮರಿಸಿದರು.