ನವದೆಹಲಿ: ಆ 07 (DaijiworldNews/SM): ಮಂಗಳವಾರದಂದು ತಡರಾತ್ರಿ ವಿಧಿವಶರಾದ ಕೇಂದ್ರದ ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಪಂಚಭೂತಗಳಲ್ಲಿ ಲೀನವಾಗಿದ್ದಾರೆ.
ಸಕಲ ಸರ್ಕಾರಿ ಗೌರವಗಳೊಂದಿಗೆ ಸುಷ್ಮಾ ಸ್ವರಾಜ್ ಅವರ ಪಾರ್ಥೀವ ಶರೀರದ ಅಂತ್ಯ ಸಂಸ್ಕಾರವನ್ನು ದೆಹಲಿಯ ಲೋಧಿ ಚಿತಾಗಾರದಲ್ಲಿ ನೆರವೇರಿಸಲಾಯಿತು.
ಅಂತ್ಯ ಸಂಸ್ಕಾರದ ವೇಳೆ ಪ್ರಧಾನಿ ಮೋದಿ, ಮಾಜಿ ಭೂತಾನ್ ಪ್ರಧಾನಿ, ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು, ಎಲ್ ಕೆ ಅಡ್ವಾಣಿ ಸೇರಿದಂತೆ ಪಕ್ಷ ಬೇಧ ಮರೆತು ಮುಖಂಡರು ಗಣ್ಯರು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದರು. ಇನ್ನು ಮಂಗಳವಾರದಂದು ದಿನವಿಡಿ ಅಂತಿಮ ನಮನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ತಮ್ಮ ನಿವಾಸ, ಬಿಜೆಪಿ ಕಚೇರಿಗಳಲ್ಲಿನ ಅಂತಿಮ ನಮನದ ವೇಳೆ ಹಲವಾರು ಗಣ್ಯರು ಸುಷ್ಮಾ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದರು.
ಇನ್ನು ಕೇಂದ್ರದ ಮಾಜಿ ಸಚಿವರಿಗೆ ನಿನ್ನೆ ಸಂಜೆ ಹೃದಯಾಘಾತವಾಗಿತ್ತು. ತಕ್ಷಣ ಅವರನ್ನು ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಿದರೂ ಫಲಿಸದೆ ಸುಮಾರು ೧೦ ಗಂಟೆಯ ವೇಳೆಗೆ ಅವರು ಕೊನೆಯುಸಿರೆಳೆದಿದ್ದರು.