ಶ್ರೀನಗರ, ಆ.08(Daijiworld News/SS): ಕಣಿವೆ ರಾಜ್ಯ ಜಮ್ಮು- ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿ, 370ನೇ ವಿಧಿ ರದ್ದುಗೊಳಿಸಿದ ಬಳಿಕ ಕಣಿವೆ ರಾಜ್ಯದಲ್ಲಿ ಭಾರಿ ಭದ್ರತೆ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿದೆ.
ಪ್ರಸ್ತುತ ಕಣಿವೆ ರಾಜ್ಯ ಶಾಂತ ಸ್ಥಿತಿಯಲ್ಲಿದೆ. ಜಮ್ಮು- ಕಾಶ್ಮೀರದ ಹಲವು ಜಿಲ್ಲೆಗಳಲ್ಲಿ 144 ಸೆಕ್ಷನ್ ಜಾರಿಯಲ್ಲಿದ್ದು, ನಾಗರಿಕರು ಮನೆಯೊಳಗೆ ಬಂಧಿಯಾಗಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಕೆಲ ರಾಜಕಾರಣಿಗಳು ಹಾಗೂ ಕಾರ್ಯಕರ್ತರು ಸೇರಿ ಸುಮಾರು 100 ಜನರನ್ನು ಭದ್ರತಾ ಪಡೆಗಳು ವಶಕ್ಕೆ ಪಡೆದಿವೆ. ಮೆಹಬೂಬಾ ಮುಫ್ತಿ, ಒಮರ್ ಅಬ್ದುಲ್ಲ ಗೃಹ ಬಂಧನ ಮುಂದುವರಿಸಲಾಗಿದೆ ಎನ್ನಲಾಗಿದೆ.
ಶ್ರೀನಗರದಲ್ಲಿ ಕರ್ಫ್ಯೂ ಮಧ್ಯೆಯೂ ಪ್ರತಿಭಟನೆಗಿಳಿದಿದ್ದ ಗುಂಪೊಂದನ್ನು ಸೈನಿಕರು ಚದುರಿಸಿದ್ದು, ಓರ್ವ ಸಾವನ್ನಪ್ಪಿದ್ದಾನೆ. ಗಾಯಗೊಂಡಿರುವ 6 ಜನರನ್ನು ಶ್ರೀನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಜತೆಗೆ ಕೆಲವೆಡೆ ಸಣ್ಣ ಪ್ರಮಾಣದಲ್ಲಿ ಕಲ್ಲು ತೂರಾಟದ ಘಟನೆಗಳಾಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಜಮ್ಮು-ಕಾಶ್ಮೀರದಲ್ಲಿ ಇಂಟರ್ನೆಟ್ ಸಂಪರ್ಕ, ಮೊಬೈಲ್ ನೆಟ್ವರ್ಕ್ ಹಾಗೂ ರೈಲು ಸೇವೆ ಸ್ಥಗಿತವಾಗಿವೆ. ಭದ್ರತೆ ಬಗ್ಗೆ ಮಾಹಿತಿ ರವಾನಿಸಲು ಸೇನೆ ಮತ್ತು ಪೊಲೀಸ್ ಅಧಿಕಾರಿಗಳಿಗೆ ಮಾತ್ರ ಸ್ಯಾಟಲೈಟ್ ಫೋನ್ಗಳನ್ನು ನೀಡಲಾಗಿದೆ. ಅನಂತ್ನಾಗ್, ಪುಲ್ವಾಮಾ, ಕುಲ್ಗಾವ್, ಶೋಪಿಯಾನ, ಬುದ್ಗಾವ್, ಶ್ರೀನಗರ, ಬಂಡಿಪೋರಾ, ಬಾರಾಮೂಲ ಇನ್ನಿತರೆಡೆ ಭದ್ರತಾ ಪಡೆಗಳ ಸರ್ಪಗಾವಲು ಹಾಕಲಾಗಿದೆ.
ಜಮ್ಮು-ಕಾಶ್ಮೀರದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಲಾಗಿದೆ. ರಾಷ್ಟ್ರೀಯ ರೈಫಲ್ಸ್ ದಳ, ಸಿಆರ್ಪಿಎಫ್, ಬಿಎಸ್ಎಫ್ ಒಳಗೊಂಡ ಸುಮಾರು 2,70,000 ಸಿಬ್ಬಂದಿ ಹದ್ದಿನ ಕಣ್ಣಿಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.