ಉತ್ತರ ಪ್ರದೇಶ,ಆ. 08 (Daijiworld News/RD): ಉತ್ತರ ಪ್ರದೇಶದ ಹುಡುಗರು, ಹಾಗೂ ನಮ್ಮ ಕಾರ್ಯಕರ್ತರು ಇನ್ನು ಮುಂದೆ ಜಮ್ಮು ಕಾಶ್ಮೀರದ ಅಂದದ ಹುಡುಗಿಯರನ್ನು ಮದುವೆಯಾಗಬಹುದು ಎಂಬ ವಿವಾದಾತ್ಮಕ ಹೇಳಿಕೆ ನೀಡಿದ ಉತ್ತರ ಪ್ರದೇಶದ ಬಿಜೆಪಿ ಶಾಸಕ ವಿಕ್ರಂ ಸಿಂಗ್ ಸೈನಿ, ಇದೀಗ ವಿಡಿಯೋ ಸಾಮಾಜಿಕ ಜಲಾತಾಣದಲ್ಲಿ ವೈರಲ್ ಆಗಿ ಸುದ್ದಿಯಾಗಿದ್ದಾರೆ.
ಸಂವಿಧಾನದಲ್ಲಿ ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಲಾಗಿದ್ದ 370ನೇ ವಿಧಿ ರದ್ದುಪಡಿಸಿದ ಕೇಂದ್ರ ಸರಕಾರದ ನಿರ್ಣಯದ ಕುರಿತು ಬಿಜೆಪಿ ಶಾಸಕ ನೀಡಿದ ಹೇಳಿಕೆ ಇದೀಗ ವಿವಾದ ಸೃಷ್ಟಿಸಿದೆ.
ಮುಜಾಫರ ನಗರದ ಕತೌಲಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಕಾಶ್ಮೀರದ ಅಂದದ ಹುಡುಗಿಯರನ್ನು ಮದುವೆಯಾಗಲು ಯಾವುದೇ ತೊಂದರೆ ಇಲ್ಲ, ಹಾಗಾಗಿ ಉತ್ತರ ಪ್ರದೇಶದ ಹುಡುಗರು ಹಾಗೂ ನಮ್ಮ ಕಾರ್ಯಕರ್ತರು ಇದೀಗ ಅಲ್ಲಿನ ಹುಡುಗಿಯರನ್ನು ವರಿಸಿಕೊಳ್ಳಲು ತುಂಬಾ ಕಾತುರದಲ್ಲಿ ಇದ್ದಾರೆ ಎಂದು ಹೇಳಿದ್ದಾರೆ. ಇದೀಗ ಇವರು ನೀಡಿದ ಹೇಳಿಕೆಯ ವೀಡಿಯೋ ತುಣುಕು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಹಿಂದೆಲ್ಲಾ ಉತ್ತರ ಪ್ರದೇಶದ ಹುಡುಗರು ಕಾಶ್ಮೀರದ ಯುವತಿಯನ್ನು ವಿವಾಹವಾದರೆ ಆಕೆ ಅಲ್ಲಿನ ನಾಗರಿಕತ್ವ ಕಳೆದುಕೊಳ್ಳುತ್ತಿದ್ದಳು. ಏಕೆಂದರೆ ಕಾಶ್ಮೀರದ ನಾಗರಿಕತ್ವ ಬೇರೆಯೇ ಆಗಿತ್ತು. ಆದರೆ ಈಗ ಆ ತರ ತೊಂದರೆ ಇಲ್ಲ. ಅಂತೆಯೇ ಇಲ್ಲಿರುವ ಮುಸ್ಲಿಂ ಕಾರ್ಯಕರ್ತರೂ ಕೂಡ ಸಂಭ್ರಮಿಸುವ ಸನ್ನಿವೇಶ ಇದೀಗ ಸೃಷ್ಠಿಯಾಗಿದೆ. ಜೊತೆಗೆ ಹಿಂದೂ ಯುವಕರೂ ಈ ವಿಚಾರದಲ್ಲಿ ಖುಷಿ ಪಡಬೇಕು, ಮಾತ್ರವಲ್ಲ ಕೇಂದ್ರದ ಈ ನಿರ್ಣಯವು ರಾಷ್ಟ್ರವೇ ಸಂಭ್ರಮಿಸುವ ವಿಚಾರವಾಗಿದೆ ಎಂದು ಬಿಜೆಪಿ ಶಾಸಕ ವಿಕ್ರಂ ಸಿಂಗ್ ಸೈನಿ ಈ ಸಂದರ್ಭದಲ್ಲಿ ಹೇಳಿದ್ದರು.
ಕಾಶ್ಮೀರದ ವಿಚಾರದಲ್ಲಿ ಬಿಜಿಪಿ ಶಾಸಕ ನೀಡಿದ ವಿವಾದಾತ್ಮಕ ಹೇಳಿಕೆಯ ವಿಡಿಯೋ ಸಾಮಜಿಕ ಜಾಲಾತಾಣದಲ್ಲಿ ವೈರಲ್ ಆಗುತ್ತಿದ್ದು, ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದ್ದು, ಶಾಸಕನನ್ನು ಸಾಮಾಜಿಕ ಜಾಲಾತಾಣಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.