ಬೆಂಗಳೂರು, ಆ 08 (Daijiworld News/MSP): ಐಎಂಎ ಬಹುಕೋಟಿ ವಂಚನೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ತಂಡವೂ ಪ್ರಮುಖ ಆರೋಪಿ ಮನ್ಸೂರ್ ಖಾನ್ನ ಮನೆ ಮೇಲೆ ದಾಳಿ ನಡೆಸಿ ಸ್ವಿಮ್ಮಿಂಗ್ ಪೂಲ್ನ ತಳಭಾಗದಲ್ಲಿ ಅಡಗಿಸಿಟ್ಟ 303 ಕೆಜಿ ತೂಕದ ನಕಲಿ ಚಿನ್ನದ ಬಿಸ್ಕತ್ತುಗಳನ್ನು ವಶಪಡಿಸಿಕೊಂಡಿದೆ.
ಎಸ್ಐಟಿ ಪ್ರಕಾರ ಮನ್ಸೂರ್ ಖಾನ್ ಈ ಚಿನ್ನದ ಗಟ್ಟಿಗಳನ್ನೇ ಅಸಲಿ ಎಂದು ತೋರಿಸಿ ಸಾರ್ವಜನಿಕರಿಂದ ಸಾವಿರಾರು ಕೋಟಿ ಹಣವನ್ನು ಹೂಡಿಕೆ ಮಾಡಲು ಆಮಿಷವೊಡ್ಡುತ್ತಿದ್ದ.
ವಿಶೇಷ ತನಿಖಾ ದಳ ದಾಳಿ ನಡೆಸಿದಾಗ ರಿಚ್ಮಂಡ್ಟೌನ್ನಲ್ಲಿರುವ ಅಪಾರ್ಟ್ಮೆಂಟ್ ನ ಈಜುಕೊಳದಲ್ಲಿ ಈ ನಕಲಿ ಚಿನ್ನ ಪತ್ತೆಯಾಗಿತ್ತು. ಈ ಅಪಾರ್ಟ್ಮೆಂಟ್ ಒಟ್ಟು ಆರು ಅಂತಸ್ತಿನ್ನು ಒಳಗೊಂಡಿದ್ದು ಹೈಟೆಕ್ ವ್ಯವಸ್ಥೆಯನ್ನು ಹೊಂದಿದೆ. ಆರನೇ ಮಹಡಿಯಲ್ಲಿರುವ ಈಜುಕೊಳದಲ್ಲಿ ಈ ನಕಲಿ ಚಿನ್ನವನ್ನು ಅಡಗಿಸಿಡಲಾಗಿತ್ತು. ಮನ್ಸೂರ್ ಖಾನ್ ವಿದೇಶಕ್ಕೆ ಪರಾರಿ ಆಗುವ ಸಂದರ್ಭ ತನ್ನ ಆಪ್ತ ವಸೀಂ ಎಂಬಾತನಿಗೆ ಈ ಚಿನ್ನವನ್ನು ಈಜುಕೊಳದಲ್ಲಿ ಬಚ್ಚಿಡಲು ಹೇಳಿದ್ದ.
ಈ ನಡುವೆ, ಮನ್ಸೂರ್ ಖಾನ್ ಹಾಗೂ ಅವರ ಒಡೆತನದ ಐಎಂಎ ಸಮೂಹ ಕಂಪನಿಗಳಿಗೆ ಸೇರಿರುವ ರೂ 350 ಕೋಟಿಗೂ ಅಧಿಕ ಮೌಲ್ಯದ ಆಸ್ತಿಯನ್ನು ರಾಜ್ಯ ಸರ್ಕಾರ ಜಪ್ತಿ ಮಾಡಿದೆ.