ನವದೆಹಲಿ, ಮಾ. 31 (DaijiworldNews/AA): ಕೊಂಕಣಿ ಸಾಹಿತಿ, ಖ್ಯಾತ ವಿಮರ್ಶಕ, ಲೇಖಕ, ಪತ್ರಕರ್ತ ಎಚ್.ಎಂ. ಪೆರ್ನಾಲ್ (ಹೆನ್ರಿ ಮೆಂಡೋನ್ಸಾ) ಅವರಿಗೆ 2025ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಇಂದು ನವದೆಹಲಿಯ ಕಮಾನಿ ಸಭಾಂಗಣದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಪ್ರದಾನ ಮಾಡಿ ಗೌರವಿಸಲಾಯಿತು.


ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಮಾಧವ ಕೌಶಿಕ್ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಪ್ರೊ. ಕುಮುದ್ ಶರ್ಮಾ ಮತ್ತು ಕಾರ್ಯದರ್ಶಿ ಪಲ್ಲವಿ ಹೋಳ್ಕರ್ ಉಪಸ್ಥಿತರಿದ್ದರು. ಖ್ಯಾತ ಹಿಂದಿ ಲೇಖಕ ವಿಶ್ವನಾಥ್ ತಿವಾರಿ ಮುಖ್ಯ ಅತಿಥಿಯಾಗಿ ಆಗಮಿಸಿ ದಿಕ್ಸೂಚಿ ಭಾಷಣ ಮಾಡಿದರು. ಕೇಂದ್ರ ಸಾಂಸ್ಕೃತಿಕ ಸಚಿವಾಲಯದ ಉಪ ಕಾರ್ಯದರ್ಶಿ ಅನೀಶ್ ಪಿ. ರಾಜನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಈ ಸಮಾರಂಭದಲ್ಲಿ ಒಟ್ಟು 23 ಭಾಷೆಗಳ ಸಾಹಿತಿಗಳಿಗೆ ಪ್ರಶಸ್ತಿ ನೀಡಿ ಗೌರವ ಸಲ್ಲಿಸಲಾಯಿತು. ಮಲಯಾಳಂ ಪ್ರಶಸ್ತಿ ಪುರಸ್ಕೃತ ಸಾಹಿತಿ ಅನಾರೋಗ್ಯದ ಕಾರಣ ಗೈರಾಗಿದ್ದರು. ಎಚ್.ಎಂ. ಪೆರ್ನಾಲ್ ಅವರು ಬರೆದ 'ಕೊಂಕಣಿ ಕಾವ್ಯೆಂ: ರುಪಾಂ ಆನಿ ರೂಪಕಾಂ' ಎಂಬ ಕೃತಿಗೆ ಈ ಗೌರವ ಲಭಿಸಿದೆ.