ನವದೆಹಲಿ,ಆ.09 (Daijiworld News/RD): ಪ್ರವಾಹದಿಂದಾಗಿ ಹಲವು ರಾಜ್ಯಗಳು ನಲುಗಿ ಹೋಗಿದ್ದು, ಅಪಾರ ಹಾನಿ ಉಂಟಾಗಿ ಸಾವು ನೋವು ಸಂಭವಿಸಿದೆ. ಜನಜೀವನ ಅಸ್ತವ್ಯಸ್ತವಾಗಿದ್ದು, ತೀರಾ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ದೇಶದ ಈ ಸ್ಥಿತಿಯ ಬಗ್ಗೆ ಕಾಳಜಿ ವ್ಯಕ್ತಪಡಿಸಿರುವ ಕಾಂಗ್ರೆಸ್ನ ನಾಯಕ ರಾಹುಲ್ ಗಾಂಧಿ, ಸಂತೃಸ್ತರಿಗೆ ಸೂಕ್ತ ನೆರವು ಒದಗಿಸುವಂತೆ ಪಕ್ಷದ ಕಾರ್ಯಕರ್ತರಿಗೆ ಮನವಿ ಮಾಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ರಾಹುಲ್, ‘ಕರ್ನಾಟಕ, ಕೇರಳ, ಮಹಾರಾಷ್ಟ್ರ, ಗುಜರಾತ್, ಒಡಿಶಾ, ಅಸ್ಸಾಂ ಹಾಗೂ ಬಿಹಾರದಲ್ಲಿ ಪ್ರವಾಹ ಪರಿಸ್ಥಿತಿಯು ಅತ್ಯಂತ ಭೀಕರವಾಗಿದ್ದು, ಲಕ್ಷಾಂತರ ಜನ ಪ್ರವಾಹಸಲ್ಲಿ ಸಿಲುಕಿ ಕೊಚ್ಚಿ ಹೋಗಿದ್ದಾರೆ. ಇನ್ನು ಕೆಲವರು ಸ್ಥಳಾಂತರಗೊಂಡಿದ್ದಾರೆ. ಆದ್ದರಿಂದ ನಾನು ಎಲ್ಲಾ ಪ್ರವಾಹ ಪೀಡಿತ ಪ್ರದೇಶಗಳ ಕಾಂಗ್ರೆಸ್ ಕಾರ್ಯಕರ್ತರಲ್ಲಿ ವಿನಂತಿಸುವುದೇನೆಂದರೆ ಸಂಕಷ್ಟದಲ್ಲಿರುವ ಸಂತ್ರಸ್ತರಿಗೆ ನೆರವು ಒದಗಿಸಬೇಕು ಮತ್ತು ಪ್ರವಾಹದ ಆದಷ್ಟು ಬೇಗ ಸುಧಾರಿಸಲಿ ಎಂದು ದೇವರಲ್ಲಿ ಪ್ರಾರ್ಥಿಸುವುದಾಗಿ’ ತಿಳಿಸಿದ್ದಾರೆ
ನದಿಗಳೆಲ್ಲವು ಮಿತಿ ಮೀರಿ ಹರಿಯುತ್ತಿದ್ದು, ದೇಶದ ಹಲವು ಭಾಗಗಳಲ್ಲಿ ಪ್ರವಾಹದಿಂದಾಗಿ ಲಕ್ಷಾಂತರ ಜನರ ಬದುಕು ಸಂಕಷ್ಟದಿಂದ ಕೂಡಿದ್ದು, ಅಪಾರ ಹಾನಿ ಉಂಟಾಗಿದೆ. ಕರ್ನಾಟಕದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ 9 ಜನ ಮೃತಪಟ್ಟಿದ್ದು, ಸುಮಾರು 50 ಸಾವಿರ ಜನರನ್ನು ಈಗಾಗಲೇ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಕಳೆದ ವರ್ಷದ ಆಗಸ್ಟ್ ನಲ್ಲಿ ಭಾರಿ ಪ್ರವಾಹಕ್ಕೆ ತುತ್ತಾಗಿದ್ದ ಕೇರಳ ಈ ವರ್ಷವೂ ಭಾರಿ ಮಳೆಗೆ ತುತ್ತಾಗಿ, ಪ್ರವಾಹ ಉಂಟಾಗಿದೆ. ಈಗಾಗಲೇ ರಾಜ್ಯ ಸರ್ಕಾರ ಸಂತ್ರಸ್ತರ ನೆರವಿಗಾಗಿ ಹಲವು ಪುನರ್ವಸತಿ ಕೇಂದ್ರಗಳನ್ನು ಆರಂಭಿಸಿದೆ. ಜೊತೆಗೆ ರಕ್ಷಣಾ ಕಾರ್ಯಾಚರಣೆಗೆ ಸಿಬ್ಬಂದಿಗಳನ್ನು ನೇಮಕ ಮಾಡಿದೆ.