ರಾಜಸ್ಥಾನ, ಏ. 01 (DaijiworldNews/AA): ಪ್ರತಿ ವರ್ಷ ಲಕ್ಷಾಂತರ ಅಭ್ಯರ್ಥಿಗಳು ಐಎಎಸ್, ಐಪಿಎಸ್ ಮತ್ತು ಐಎಫ್ಎಸ್ ನಂತಹ ಉನ್ನತ ಅಧಿಕಾರಿಕಾರಿಗಳಾಗಬೇಕೆಂಬ ಆಕಾಂಕ್ಷೆಯಿಂದ ಯುಪಿಎಸ್ಸಿ ಪರೀಕ್ಷೆಯನ್ನು ಬರೆಯುತ್ತಾರೆ. ಇಂತಹ ಆಕಾಂಕ್ಷೆ ಹೊತ್ತು ಯುಪಿಎಸ್ಸಿ ಪರೀಕ್ಷೆ ಬರೆದು ಐಎಎಸ್ ಅಧಿಕಾರಿಯಾಗುವ ತನ್ನ ಕನಸನ್ನ ನನಸಾಗಿಸಿಕೊಂಡ ನೀಲೇಶ್ ಗೋಯಲ್ ಅವರ ಯಶೋಗಾಥೆ ಇದು.

ನೀಲೇಶ್ ಅವರು ರಾಜಸ್ಥಾನದ ಕರೌಲಿಯ ಮಧ್ಯಮ ವರ್ಗದ ಕುಟುಂಬದವರು. ಅವರ ತಂದೆ ವೇದ ಪ್ರಕಾಶ್ ಗೋಯಲ್ ಉದ್ಯಮಿಯಾಗಿದ್ದರೆ, ತಾಯಿ ಮಂಜು ಗೋಯಲ್ ಗೃಹಿಣಿ.
ನೀಲೇಶ್ ಅವರು ಆರಂಭದಿಂದಲೂ ಓದಿನಲ್ಲಿ ಮುಂದಿದ್ದರು. ಈಶವ್ ವಿದ್ಯಾ ಮಂದಿರದಲ್ಲಿ ವ್ಯಾಸಂಗ ಮಾಡಿದ ಅವರು ಹತ್ತನೇ ತರಗತಿಯಲ್ಲಿ 90.83% ಅಂಕ ಗಳಿಸುತ್ತಾರೆ. ಎಂ.ಬಿ. ಪಬ್ಲಿಕ್ ಶಾಲೆಯಲ್ಲಿ ದ್ವಿತೀಯ ಪಿಯುಸಿ ಓದಿದ ಅವರು 89.20% ಅಂಕ ಪಡೆದರು. ಬಳಿಕ ಜೈಪುರದ ಮಾಳವೀಯ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಗಳಿಸಿದರು.
ಯುಪಿಎಸ್ಸಿ ಪರೀಕ್ಷೆ ಬರೆಯುವ ಮೊದಲು ನೀಲೇಶ್ ಅವರು ಪ್ರತಿಷ್ಠಿತ ಭಾರತ್ ಸಂಸ್ಥೆಯೊಂದರಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಬಳಿಕ ಅವರು ಯುಪಿಎಸ್ಸಿ ಪರೀಕ್ಷೆ ಬರೆಯಲು ನಿರ್ಧರಿಸಿದ ಅವರು ಸಮಾಜಶಾಸ್ತ್ರವನ್ನು ತಮ್ಮ ಐಚ್ಛಿಕ ವಿಷಯವನ್ನಾಗಿ ಆಯ್ಕೆಮಾಡಿಕೊಳ್ಳುತ್ತಾರೆ. ತಮ್ಮ ಮೊದಲ ಪ್ರಯತ್ನದಲ್ಲಿ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಅವರು ವಿಫಲರಾಗುತ್ತಾರೆ.
2024ರಲ್ಲಿ ಎರಡನೇ ಬಾರಿಗೆ ಯುಪಿಎಸ್ಸಿ ಪರೀಕ್ಷೆ ಬರೆದ ನೀಲೇಶ್ ಅವರು, 77ನೇ ಅಖಿಲ ಭಾರತ ರ್ಯಾಂಕ್ ಪಡೆಯುವಲ್ಲಿ ಯಶಸ್ವಿಯಾದರು. ಈ ಮೂಲಕ ತಮ್ಮ ಐಎಎಸ್ ಅಧಿಕಾರಿಯಾಗುವ ಕನಸನ್ನು ನನಸು ಮಾಡಿಕೊಂಡರು. ನೀಲೇಶ್ ಅವರು ಇಂಜಿನಿಯರ್ ಆಗಿ ಕೆಲಸ ಮಾಡುತ್ತಲೇ ಯುಪಿಎಸ್ಸಿ ಪರೀಕ್ಷೆಯಲ್ಲಿ ಉನ್ನತ ರ್ಯಾಂಕ್ ಪಡೆಯುವ ಮೂಲಕ ಅನೇಕ ಅಭ್ಯರ್ಥಿಗಳಿಗೆ ಮಾದರಿಯಾಗಿದ್ದಾರೆ.