ನವದೆಹಲಿ, ಏ. 02 (DaijiworldNews/AA): ಭಾರತೀಯ ಕಲಾ ಪಿತಾಮಹ ರಾಜಾ ರವಿವರ್ಮ ಅವರ ಕುಂಚದಲ್ಲಿ ಮೂಡಿಬಂದ ಯಶೋಧ ಮತ್ತು ಕೃಷ್ಣ ಇರುವ ಚಿತ್ರಕಲೆಯನ್ನು ಉದ್ಯಮಿ, ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಸಂಸ್ಥಾಪಕ ಡಾ.ಸೈರಸ್ ಪೂನಾವಾಲಾ ಅವರು 167.2 ಕೋಟಿ ರೂ.ಗೆ ಖರೀದಿ ಮಾಡಿದ್ದಾರೆ.

ಸಫ್ರಾನ್ ಆರ್ಟ್ ಸಂಸ್ಥೆ ಆನ್ಲೈನ್ನಲ್ಲಿ ಆಯೋಜಿಸುವ ಸಫ್ರಾನ್ ಆರ್ಟ್ ಸೇಲ್ ಎಂಬ ಹರಾಜಿನಲ್ಲಿ ಯಶೋಧ ಮತ್ತು ಕೃಷ್ಣ ಆಯಿಲ್ ಪೇಂಟಿಂಗ್ ದಾಖಲೆಯ ಮೊತ್ತಕ್ಕೆ ಮಾರಾಟವಾಗಿದೆ. ಇದು ಚಿತ್ರಕಲೆ ಹರಾಜಿನಲ್ಲಿ ಮಾರಾಟವಾದ ಅತ್ಯಂತ ದುಬಾರಿ ಭಾರತೀಯ ಕಲಾಕೃತಿಯಾಗಿದೆ. ಇದೇ ಮೊದಲ ಬಾರಿಗೆ 167.2 ಕೋಟಿ ರೂ. ಮೌಲ್ಯಕ್ಕೆ ಮಾರಾಟವಾದ ಅತ್ಯಂತ ದುಬಾರಿಯ ಚಿತ್ರಕಲೆ ಇದಾಗಿದೆ.
1890ರ ದಶಕದಲ್ಲಿ ರವಿ ವರ್ಮಾ ರಚಿಸಿದ 'ಯಶೋಧಾ ಮತ್ತು ಕೃಷ್ಣ' ಚಿತ್ರಕಲೆಯು 80 ಕೋಟಿ ರೂ.ನಿಂದ 120 ಕೋಟಿ ರೂ.ವರೆಗೆ ಮಾರಾಟವಾಗಲಿದೆ ಎಂದು ಅಂದಾಜು ಮಾಡಲಾಗಿತ್ತು. ಆದರೆ ಇದೀಗ ಈ ಪೇಂಟಿಂಗ್ ಅಂದಾಜು ಬೆಲೆಗಿಂತ ಎರಡು ಪಟ್ಟು ಹೆಚ್ಚು ಬೆಲೆಗೆ ಮಾರಾಟವಾಗಿದೆ.
ಕಳೆದ ವರ್ಷ ಎಂ.ಎಫ್. ಹುಸೇನ್ ಅವರ 'ಅನ್ಟೈಟಲ್ಡ್' ಚಿತ್ರಕಲೆಯು 118 ಕೋಟಿ ರೂ.ಗೆ ಮಾರಾಟವಾಗಿತ್ತು. ಇದೀಗ ರವಿವರ್ಮ ಅವರ ಯಶೋಧ ಮತ್ತು ಕೃಷ್ಣ ಚಿತ್ರಕಲೆಯು ದುಬಾರಿ ಮೊತ್ತಕ್ಕೆ ಮಾರಾಟವಾಗಿ ಹೊಸ ದಾಖಲೆ ಸೃಷ್ಟಿಸಿದೆ.
ಪೇಂಟಿಂಗ್ ಖರೀದಿಸಿದ ಬಳಿಕ ಸೈರಸ್ ಪೂನಾವಾಲಾ ಅವರು ಮಾಹಿತಿ ಹಂಚಿಕೊಂಡಿದ್ದು, "ಇದನ್ನು ಖರೀದಿಸುವುದು ಹಕ್ಕು ಹಾಗೂ ಒಂದು ಜವಾಬ್ದಾರಿಯೂ ಹೌದು. ಇದು ಕೇವಲಕ್ಕೆ ಚಿತ್ರಕಲೆಯಲ್ಲ. ರಾಷ್ಟ್ರೀಯ ಸಂಪತ್ತು. ಹಾಗಾಗಿ ಸಾರ್ವಜನಿಕ ವೀಕ್ಷಣೆಗೆ ಇದು ಲಭ್ಯವಾಗಬೇಕು. ಜನರಿಗೆ ನೋಡಲು ಸಿಗುವಂತೆ ನನ್ನ ಕೈಲಾದಷ್ಟು ನಾನು ಪ್ರಯತ್ನಿಸುತ್ತೇನೆ" ಎಂದು ತಿಳಿಸಿದ್ದಾರೆ.