ದಾವಣಗೆರೆ, ಏ. 02 (DaijiworldNews/AK): ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ಗೆ ಸೋಲಿನ ಭೀತಿ ಮತ್ತು ಭಯ ಆರಂಭವಾಗಿದೆ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಅವರು ತಿಳಿಸಿದ್ದಾರೆ.

ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆಯ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಸರ್ಕಾರ ಹುಟ್ಟಿದ್ದೇ ಸುಳ್ಳಿನಿಂದ. ಅದಕ್ಕೆ ಈಗಲೂ ಅವರು ಸುಳ್ಳು ಹೇಳುತ್ತಿದ್ದಾರೆ. ಬಾಗಲಕೋಟೆ ಮತ್ತು ದಾವಣಗೆರೆಯಲ್ಲಿ ಬಿಜೆಪಿ ಗೆದ್ದರೆ ಗ್ಯಾರಂಟಿಗಳನ್ನು ಬಂದ್ ಮಾಡುತ್ತೇವೆ ಎಂದು ಸಿಎಂ ಹೇಳುತ್ತಾರೆ. ಕರ್ನಾಟಕದಲ್ಲಿ ಇರುವುದು ಕಾಂಗ್ರೆಸ್ ಸರ್ಕಾರವೇ ಹೊರತು ಬಿಜೆಪಿ ಸರ್ಕಾರವಲ್ಲ. ಆದ್ದರಿಂದ ಗ್ಯಾರಂಟಿ ನಿಲ್ಲಿಸುವುದಿದ್ದರೆ ಅವರೇ ನಿಲ್ಲಿಸಬೇಕು ಎಂದರು.
ಕಾಂಗ್ರೆಸ್ನವರು ಮೊದಲಿನಿಂದಲೂ ಜನರು ದಡ್ಡರು ಅಂತ ತಿಳಿದಿದ್ದಾರೆ. ಆದರೆ ಈಗ ಎರಡೂ ಕಡೆ ಸೋಲುತ್ತಿದ್ದೇವೆ ಎಂಬ ಮನವರಿಕೆ ಅವರಿಗೆ ಅಗಿದೆ. ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ದಾಸ್ ಕರಿಯಲ್ಲ ಅವರ ಪರವಾಗಿ ಎಲ್ಲರೂ ಒಂದಾಗಿ ಕೆಲಸ ಮಾಡುತ್ತಿದ್ದೇವೆ. ಇದರಿಂದ ಕಾಂಗ್ರೆಸ್ಗೆ ಸೋಲಿನ ಭೀತಿ ಪ್ರಾರಂಭವಾಗಿದೆ ಎಂದರು.
ಸಿದ್ದರಾಮಯ್ಯ ಅವರಿಗೆ ಡಿ ಕೆ ಶಿವಕುಮಾರ್ ಅವರನ್ನು ಕಂಡರೂ ಭಯ ಆರಂಭವಾಗಿದೆ. ಈ ಉಪ ಚುನಾವಣೆ ಬಂದ ನಂತರ ಬಿಜೆಪಿ ಕಂಡರೂ ಭಯವಾಗುತ್ತಿದೆ ಎಂದು ನುಡಿದರು. 2018 ರಲ್ಲಿ ಚುನಾವಣೆ ನಡೆದಾಗ ದಲಿತ ನಾಯಕ ಡಾ. ಜಿ ಪರಮೇಶ್ವರ್ ಅವರನ್ನು ಮುಖ್ಯಮಂತ್ರಿ ಮಾಡಬೇಕು ಎಂದು ಆಗಿತ್ತು. ಆಗ ಸಿದ್ದರಾಮಯ್ಯ ಪರಮೇಶ್ವರ್ ಅವರನ್ನು ಸೋಲಿಸಿದರು. ಈಗ ಕಾಲ ಬದಲಾಗಿದೆ. ಅಹಿಂದ ಹೆಸರು ಹೇಳಿಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಅಧಿಕಾರ ಹಂಚಿಕೆ ಮಾಡುವಾಗ ಅಹಿಂದ ಇಲ್ಲ. ಬೇಕಾದವರಿಗೆ ಮಾತ್ರ ಅಧಿಕಾರ ಕೊಟ್ಟರು ಎಂದರು.
ಬಿಜೆಪಿಯನ್ನು ಕಳ್ಳ ಎತ್ತುಗಳಿಗೆ ಸಿದ್ದರಾಮಯ್ಯ ಅವರು ಹೋಲಿಸಿದ್ದಾರೆ. ಗೋಮಾತೆಗೆ ಹೋಲಿಸಿದ್ದಕ್ಕೆ ಧನ್ಯವಾದಗಳು. ದನಕರುಗಳು ಮೇವು ಸಿಕ್ಕರೆ ಎಷ್ಟು ಬೇಕೋ ಅಷ್ಟನ್ನೇ ತಿಂದು ಮನೆಗೆ ಹೋಗುತ್ತವೆ. ಆದರೆ ಸಿದ್ದರಾಮಯ್ಯ ಅವರ ಸರ್ಕಾರದ ಮಂತ್ರಿಗಳು ಈ ರಾಜ್ಯದ ಖಜಾನೆ ಹಣವನ್ನು ಲೂಟಿ ಮಾಡುತ್ತಿದ್ದಾರೆ. ಐದರಿಂದ ಹತ್ತು ತಲೆಮಾರಿಗೆ ಸಾಕಾಗುವಷ್ಟು ಹಣ ಮಾಡಿದ್ದಾರೆ. ರಾಜ್ಯದ ಬೊಕ್ಕಸ ಖಾಲಿ ಮಾಡಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮ, ಪರಿಶಿಷ್ಟ ನಿಗಮ ಹೀಗೆ ಎಲ್ಲೆಡೆ ಭ್ರಷ್ಟ್ರಚಾರ ಮಾಡಿದರು. ಹೀಗೆ ಲೂಟಿ ಮಾಡಿದ ಹಣವನ್ನು ಬೇರೆ ಬೇರೆ ರಾಜ್ಯದ ಚುನಾವಣೆ ಹಾಗೂ ಲೋಕಸಭಾ ಚುನಾವಣೆಗೆ ಬಳಸಿದರು ಎಂದು ವಿವರಿಸಿದರು.