ದಾವಣಗೆರೆ, ಏ. 02 (DaijiworldNews/AK): ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಕಾಂಗ್ರೆಸ್ ಕೊಡುಗೆ ದೊಡ್ಡ ಸೊನ್ನೆ. ಈ ಕ್ಷೇತ್ರದಲ್ಲಿ ಒಂದೇ ಕುಟುಂಬದ ಸದಸ್ಯರೇ ಹಲವು ವರ್ಷಗಳಿಂದ ಆಡಳಿತದಲ್ಲಿ ಇದ್ದರೂ ಅಭಿವೃದ್ಧಿಗೆ ಏನೂ ಮಾಡಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರು ಆರೋಪಿಸಿದರು.

ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕ್ಷೇತ್ರಕ್ಕೆ ಕಾಂಗ್ರೆಸ್ ಶಾಸಕರು, ಸಂಸದರು ಏನು ಮಾಡಲಿಲ್ಲ. ಅಭಿವೃದ್ಧಿ ಏನಿದ್ದರೂ ಬಿಜೆಪಿ ಅವಧಿಯಲ್ಲೇ ಆಗಿರುವುದು. ಜಿ ಎಂ ಸಿದೇಶ್ವರ ಅವರು ಸಂಸದರಾಗಿದ್ದಾಗ ನಾನು ಕೇಂದ್ರ ರೈಲ್ವೆ ಸಚಿವನಾಗಿದ್ದ ವೇಳೆ ತುಮಕೂರು -ಚಿತ್ರದುರ್ಗ- ದಾವಣಗೆರೆ ನೇರ ರೈಲ್ವೆ ಮಾರ್ಗಕ್ಕೆ ಮನವಿ ಸಲ್ಲಿಸಲು ನಿಯೋಗದಲ್ಲಿ ಬಂದಿದ್ದರು. ಆಗ ಶ್ಯಾಮನೂರು ಅವರು ಭೂಸ್ವಾಧೀನಕ್ಕೆ ಸಹಾಯ ಮಾಡಲಿಲ್ಲ ಎಂದು ದೂರಿದರು.
ದಕ್ಷಿಣ ಭಾರತದಲ್ಲಿ ರಸಗೊಬ್ಬರ ಕಾರ್ಖಾನೆ ಇಲ್ಲ. ನಾನು ಕೇಂದ್ರ ಸಚಿವ ಆಗಿದ್ದಾಗ ಸಂಸದ ಸಿದ್ದೇಶ್ವರ ಅವರು ಬಂದು ಕಾರ್ಖಾನೆ ಬೇಕು ಎಂದು ಮನವಿ ಮಾಡಿದರು. ಸಮೀಕ್ಷೆ ಮಾಡಿಸಿದರು. ಮೂರು ಜಾಗ ಗುರುತಿಸಿದರು. ಅದರಲ್ಲಿ ದಾವಣಗೆರೆ ಮೊದಲು ಇತ್ತು. ಸಿದ್ದರಾಮಯ್ಯ ಅವರಿಗೆ ಜಾಗ ಕೊಡಿ ಎಂದು ಭಿಕ್ಷೆ ಬೇಡಿದೆವು. ಆದರೆ ಅವರು ಜಾಗ ಕೊಡಲಿಲ್ಲ ಎಂದರು.
ಈ ಉಪ ಚುನಾವಣೆಯನ್ನು ಬಿಜೆಪಿ ಸವಾಲಾಗಿ ಸ್ವೀಕರಿಸಿದೆ, ಸಿದ್ದರಾಮಯ್ಯ ಅವರ ಸರ್ಕಾರ ಜನರ ನಂಬಿಕೆಗೆ ವಿರುದ್ಧವಾಗಿ ನಡೆದುಕೊಂಡಿದೆ. ಉಪ ಚುನಾವಣೆಯೇ ಸರ್ಕಾರದ ಅಧಃಪತನವನ್ನು ಆರಂಭ ಮಾಡಲಿದೆ ಎಂದು ವಿಶ್ಲೇಷಿಸಿದರು.
ಕ್ಷೇತ್ರದ ಜನ ಬಿಜೆಪಿ ಪರವಾಗಿ ನಿಂತಿದ್ದಾರೆ. ದಾವಣಗೆರೆ ಬಿಜೆಪಿಯಲ್ಲಿ ಆಂತರಿಕ ಕಚ್ಚಾಟ ಇದೆ ಎಂದು ಆರಂಭದಲ್ಲಿ ಕಾಂಗ್ರೆಸ್ನವರು ಖುಷಿಯಾಗಿದ್ದರು. ಆದರೆ ಪರಿಸ್ಥಿತಿ ಬದಲಾಗಿದೆ. ಅಭ್ಯರ್ಥಿ ಶ್ರೀನಿವಾಸ್ ದಾಸ್ ಕರಿಯಪ್ಪ ಅವರ ಪರವಾಗಿ ನಮ್ಮೆಲ್ಲ ಕಾರ್ಯಕರ್ತರು, ಮುಖಂಡರು ಒಟ್ಟಾಗಿ ಒಂದಾಗಿ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ಒಡೆದ ಮೆನೆಯಲ್ಲ, ಬದಲಿಗೆ ಚೂರುಚೂರಾದ ಮನೆ. ಬಿಜೆಪಿ ಯುನೈಟೆಡ್ ಆಗಿದ್ದರೆ ಕಾಂಗ್ರೆಸ್ ಡಿವೈಡೆಡ್ ಆಗಿದೆ. ಆದ್ದರಿಂದ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದರು.
ಸಿದ್ದರಾಮಯ್ಯ ಅವರು ಅಹಿಂದವನ್ನು ಭಾಷಣಕ್ಕೆ ಸೀಮಿತ ಮಾಡಿದ್ದಾರೆ. ಅಹಿಂದ ಮಂತ್ರ ಪಠಿಸುವ ಅವರು, ಬಜೆಟ್ನಲ್ಲಿ, ಕಾರ್ಯಕ್ರಮಗಳಲ್ಲಿ ಅಹಿಂದವನ್ನು ಮರೆತರು. ಅಹಿಂದ ಈಗ ಬಿಜೆಪಿ ಪರವಾಗಿದೆ. ಅಹಿಂದ ಅಭ್ಯರ್ಥಿಯನ್ನೇ ಕ್ಷೇತ್ರದಲ್ಲಿ ಕಣಕ್ಕಿಳಿಸಿದ್ದೇವೆ. ಅಹಿಂದ ಹೇಳಿಕೊಂಡು ಅಧಿಕಾರಕ್ಕೆ ಹೋದವರು ಅಹಿಂದ ಸಮುದಾಯವನ್ನೇ ನಿರ್ಲಕ್ಷ್ಯ ಮಾಡಿದರು. ಈಗ ಅವರೇ ಕಾಂಗ್ರೆಸ್ಗೆ ಬುದ್ಧಿ ಕಲಿಸಲಿದ್ದಾರೆ ಎಂದು ವಿವರಿಸಿದರು.