ಮುಂಬೈ, ಏ. 02 (DaijiworldNews/AK): ಭಾರತೀಯ ರೂಪಾಯಿ 12 ವರ್ಷಗಳ ಬಳಿಕ ಒಂದೇ ದಿನ ಡಾಲರ್ ವಿರುದ್ಧ ಅತಿದೊಡ್ಡ ಏರಿಕೆಯನ್ನು ದಾಖಲಿಸಿದೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ರೂಪಾಯಿ ಮೌಲ್ಯದ ಮೇಲೆ ನಡೆಯುವ ಊಹಾಪೋಹದ ವಹಿವಾಟುಗಳಿಗೆ ಕಡಿವಾಣ ಹಾಕಿದೆ. ಈ ಕ್ರಮವನ್ನು ಕೈಗೊಂಡ ಬಳಿಕ ರೂಪಾಯಿ ಮೌಲ್ಯವು ಒಂದೇ ದಿನದಲ್ಲಿ ಸುಮಾರು 1.8% ನಷ್ಟು ಏರಿಕೆ ಕಂಡಿದೆ.
ಮಾ.31 ರಂದು ಒಂದು ಡಾಲರ್ಗೆ 95 ರೂ. ದಾಟಿದ್ದ ರೂಪಾಯಿ ಮೌಲ್ಯ ಇಂದು 93.14 ರೂ. ಅಸುಪಾಸಿನಲ್ಲಿ ವ್ಯವಹಾರ ನಡೆಸುತ್ತಿದೆ. ಟ್ರಂಪ್ ಭಾಷಣದ ಬಳಿಕ ವಿಶ್ವದ ಷೇರು ಮಾರುಕಟ್ಟೆಗಳು ಕುಸಿದಿದ್ದವು. ಪರಿಣಾಮ ಬೆಳಗ್ಗೆ ಸೆನ್ಸೆಕ್ಸ್ 1,588 ಅಂಕ ಕುಸಿದಿದ್ದರೆ ನಿಫ್ಟಿ 496 ಅಂಕ ಕುಸಿದಿತ್ತು. ಆದರೆ ರೂಪಾಯಿ ಮೌಲ್ಯ ಚೇತರಿಕೆ, ನಿಫ್ಟಿ ಐಟಿ ಸೂಚ್ಯಂಕ 772 ಅಂಕ(2.6%) ರಷ್ಟು ಏರಿಕೆಯಾಗಿದ್ದರಿಂದ ಸೆನ್ಸೆಕ್ಸ್ ಮತ್ತು ನಿಫ್ಟಿ ಏರಿಕೆ ಕಾಣಲು ಆರಂಭಿಸಿತು.
ಮಧ್ಯಾಹ್ನದ ನಂತರ ಚೇತರಿಸಿಕೊಂಡ ಸೆನ್ಸೆಕ್ಸ್, ದಿನದ ಕನಿಷ್ಠ ಮಟ್ಟದಿಂದ ಸುಮಾರು 1,700 ಅಂಕಗಳಷ್ಟು ಏರಿಕೆ ಕಂಡು ಅಂತಿಮವಾಗಿ 73,319.55 (+185) ಅಂಕಗಳಲ್ಲಿ ವ್ಯವಹಾರ ಕೊನೆಗೊಳಿಸಿದರೆ ನಿಫ್ಟಿ 530 ಅಂಕಗಳಷ್ಟು ಭರ್ಜರಿ ಚೇತರಿಕೆ ಕಂಡು 22,713.10 (+33) ಅಂಕಗಳಲ್ಲಿ ವ್ಯವಹಾರ ಮುಕ್ತಾಯಗೊಳಿಸಿತು.