ಮಡಿಕೇರಿ, ಏ. 03 (DaijiworldNews/TA): ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಕಕ್ಕಬ್ಬೆ ಗ್ರಾಮದಲ್ಲಿ ಟ್ರೆಕ್ಕಿಂಗ್ಗೆ ತೆರಳಿದ್ದ ಯುವತಿ ನಾಪತ್ತೆಯಾಗಿರುವ ಘಟನೆ ಆತಂಕಕ್ಕೆ ಕಾರಣವಾಗಿದೆ. ಕೇರಳ ಮೂಲದ ಶರಣ್ಯ ಜಿ.ಎಸ್. ಎಂಬ ಯುವತಿ ನಿನ್ನೆ ತಡಿಯಂಡಮೋಳ್ ಬೆಟ್ಟಕ್ಕೆ ಚಾರಣಕ್ಕೆ ತೆರಳಿದ್ದ ವೇಳೆ ಕಾಣೆಯಾಗಿದ್ದಾಳೆ.

ಖಾಸಗಿ ಹೋಂಸ್ಟೇಯಲ್ಲಿ ತಂಗಿದ್ದ ಶರಣ್ಯ, ನಿನ್ನೆ ಒಬ್ಬಳೇ ಟ್ರೆಕ್ಕಿಂಗ್ಗೆ ತೆರಳಲು ಮುಂದಾಗಿದ್ದಳು. ಆ ಪ್ರದೇಶದಲ್ಲಿ ಕಾಡಾನೆಗಳ ಸಂಚಾರ ಹೆಚ್ಚಿರುವ ಹಿನ್ನೆಲೆ, ಸಿಬ್ಬಂದಿ ಇತರರ ಜೊತೆ ಅವಳನ್ನು ಕಳುಹಿಸಿದ್ದರು. ಆದರೂ ಸಂಜೆಯಾದರೂ ಶರಣ್ಯ ವಾಪಸ್ ಆಗದ ಕಾರಣ ತಕ್ಷಣವೇ ಶೋಧ ಕಾರ್ಯ ಆರಂಭಿಸಲಾಯಿತು.
ನಾಪತ್ತೆಯಾದ ಯುವತಿಗಾಗಿ ಅರಣ್ಯ ಇಲಾಖೆಯ 50ಕ್ಕೂ ಹೆಚ್ಚು ಸಿಬ್ಬಂದಿ ಹಾಗೂ ಪೊಲೀಸ್ ಸಿಬ್ಬಂದಿ ಸೇರಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ತಡರಾತ್ರಿ 3 ಗಂಟೆಯವರೆಗೆ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಸಿಕ್ಕಿಲ್ಲ. ನಾಪತ್ತೆಯಾಗುವ ಮೊದಲು ಶರಣ್ಯ ತನ್ನ ಹೋಂಸ್ಟೇ ಮಾಲೀಕರಿಗೆ ಕರೆ ಮಾಡಿ ತಾನು ದಾರಿ ತಪ್ಪಿರುವುದಾಗಿ ತಿಳಿಸಿದ್ದಳು. ಬಳಿಕ ಆಕೆಯ ಮೊಬೈಲ್ ಸಂಪರ್ಕ ಕಡಿತಗೊಂಡಿದೆ.
ಕೇರಳದಿಂದ ಪ್ರವಾಸಕ್ಕೆ ಬಂದಿದ್ದ ಶರಣ್ಯ, ಒಟ್ಟು 9 ಜನರ ತಂಡದ ಜೊತೆ ಚಾರಣಕ್ಕೆ ತೆರಳಿದ್ದಳು. ನಾಯಿಗಳ ಜೊತೆ ಆಟವಾಡುತ್ತಾ ಹಿಂದುಳಿದ ಕಾರಣ ಉಳಿದವರ ಸಂಪರ್ಕ ಕಳೆದುಕೊಂಡು ನಾಪತ್ತೆಯಾಗಿದ್ದಾಳೆ ಎಂದು ತಿಳಿದುಬಂದಿದೆ. ಶ್ವಾನ ದಳದ ಸಹಾಯದಿಂದಲೂ ಶೋಧ ಕಾರ್ಯ ನಡೆಯುತ್ತಿದ್ದು, ನಿನ್ನೆ ಮಧ್ಯಾಹ್ನ 2.30ರ ಸುಮಾರಿಗೆ ಶರಣ್ಯ ನಾಪತ್ತೆಯಾಗಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿದೆ.