ನವದೆಹಲಿ, ಏ. 03 (DaijiworldNews/AA): ಭಾರತವು ಅಮೆರಿಕದ ಆದೇಶ ಪಾಲಿಸುವ ದೇಶವಲ್ಲ ಎಂದು ಹೇಳುವ ಮೂಲಕ ವಿಶ್ವಸಂಸ್ಥೆಯ ಮಾಜಿ ಭಾರತೀಯ ರಾಯಭಾರಿ ಸೈಯದ್ ಅಕ್ಬರುದ್ದೀನ್ ಅವರು ಭಾರತ ಸರ್ಕಾರವು ಅಮೆರಿಕದೊಂದಿಗೆ ಒಪ್ಪಂದ ಮಾಡಿಕೊಂಡಿದೆ ಎಂಬ ವಿರೋಧ ಪಕ್ಷಗಳ ಆರೋಪವನ್ನು ತಳ್ಳಿಹಾಕಿದ್ದಾರೆ.

ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, "ಭಾರತವು ಅಮೆರಿಕ ಅಧ್ಯಕ್ಷ ಟ್ರಂಪ್ಗೆ ಅವಿಧೇಯತೆ ತೋರಿದ ನಿದರ್ಶನಗಳ ದೀರ್ಘ ಪಟ್ಟಿಯೇ ಇದೆ. ಭಾರತ ಅಮೆರಿಕವನ್ನು ಅನುಸರಿಸುತ್ತಿದೆ ಎನ್ನುವ ಆರೋಪಗಳು ಕೂಡ ಆಧಾರ ರಹಿತ. ಡೊನಾಲ್ಡ್ ಟ್ರಂಪ್ ಶಾಂತಿ ಮಂಡಳಿಯನ್ನು ರಚಿಸಿದ್ದಾರೆ. ಪಾಕಿಸ್ತಾನ ಸೇರಿಕೊಂಡಿದೆ, ಭಾರತ ಸೇರಿಕೊಂಡಿಲ್ಲ ಯಾಕೆಂದರೆ ಅದು ನಿಜವಾದ ಅಂತಾರಾಷ್ಟ್ರೀಯ ಸಂಘಟನೆಯಲ್ಲ ಎಂದು ನಮಗೆ ತಿಳಿದಿದೆ" ಎಂದು ಹೇಳಿದರು.
"ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕೂಡ ಹಲವಾರು ಸಂದರ್ಭಗಳಲ್ಲಿ ಇದೇ ರೀತಿಯ ಹೇಳಿಕೆಗಳನ್ನು ನೀಡಿದ್ದರು. ಭಾರತವು ತಮ್ಮ ಮೂಲಕ ಇರಾನ್ ಜೊತೆ ಮಾತುಕತೆ ನಡೆಸಬೇಕೆಂದು ಅಮೆರಿಕ ಬಯಸಿತ್ತು, ನಾವು ಮಾಡಲಿಲ್ಲ, ಉಕ್ರೇನ್ ಸಮಯದಲ್ಲಿ ಭಾರತವು ಅಮೆರಿಕದ ಪರವಾಗಿ ಮತ ಚಲಾಯಿಸಬೇಕೆಂದು ಅಮೆರಿಕ ಬಯಸಿತ್ತು . ನಾವು ಮಾಡಲಿಲ್ಲ. ಭಾರತವು ಅಮೆರಿಕದ ಆದೇಶಗಳನ್ನು ಪಾಲಿಸುವ ದೇಶವಲ್ಲ" ಎಂದು ತಿಳಿಸಿದರು.