ದಾವಣಗೆರೆ,ಏ. 03 (DaijiworldNews/AK): ಹದಿನಾರು ಬಜೆಟ್ ಮಂಡಿಸಿದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಣ್ಕಟ್ಟು ವಿದ್ಯೆ ಕಲಿತಿದ್ದಾರೆ. ಅಭಿವೃದ್ಧಿಗೆ ಹಣ ನೀಡದೆ, ಗ್ಯಾರಂಟಿಗಳನ್ನೂ ಸರಿಯಾಗಿ ಅನುಷ್ಟಾನ ಮಾಡದೆ ಆರ್ಥಿಕ ಶಿಸ್ತು ಪಾಲಿಸುತ್ತಿದ್ದೇವೆ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು ವಿರೋಧಪಕ್ಷದ ನಾಯಕ ಆರ್ ಅಶೋಕ್ ಅವರು ದೂರಿದ್ದಾರೆ.

ಮಾಧ್ಯಮಗಳೊಂದಿಗೆ ಇಂದು ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಸರ್ಕಾರಕ್ಕೆ ಶಿಸ್ತೇ ಇಲ್ಲ. ಒಂದೇ ಒಂದು ಅಭಿವೃದ್ಧಿ ಕಾರ್ಯವನ್ನು ಈ ಸರ್ಕಾರ ಮಾಡಿಲ್ಲ. ಸುಳ್ಳು ಹೇಳಿಕೊಂಡೇ ಮೂರು ವರ್ಷ ಕಳೆದಿದೆ ಎಂದರು. ಸಿದ್ದರಾಮಯ್ಯ ಅವರಿಗೆ ಸುಳ್ಳು ರಾಮಯ್ಯ ಎಂಬ ಬಿರುದು ಕೊಡಬೇಕು. ಗ್ಯಾರಂಟಿಗಳ ವಿಚಾರವಾಗಿಯಂತೂ ಅವರು ಸುಳ್ಳಿನ ಪುಂಗಿ ಊದುತ್ತಿದ್ದಾರೆ. ಸಾಲದ ರಾಮಯ್ಯ ಅಲ್ಲ ಅನ್ನದರಾಮಯ್ಯ ಎಂದು ಹೇಳಿದರು. ಇಂದಿರಾ ಕಿಟ್ ಕೊಡ್ತೇವೆ ಅಂದ್ರು. ಎಲ್ಲಿ ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಅವರ ಸರ್ಕಾರದ ಅನ್ನಭಾಗ್ಯ ಯೋಜನೆಗೆ ಅಕ್ಕಿ ಕೊಡ್ತ ಇರೋದು ಕೇಂದ್ರ ಸರ್ಕಾರ. ಆದರೆ ಚೀಲ ಮಾತ್ರ ಸಿದ್ದರಾಮಯ್ಯ ಅವರದು. ಕೇಂದ್ರ ಸರ್ಕಾರದ ಅಕ್ಕಿಗೆ ಕನ್ನ ಹಾಕುವ ಇವರು ಕನ್ನರಾಮಯ್ಯ ಎಂದು ವ್ಯಂಗ್ಯವಾಡಿದರು. ಗ್ಯಾರಂಟಿಗಳನ್ನು ಬಿಜೆಪಿಯವರು ವಿರೋಧಿಸುತ್ತಿದ್ದಾರೆ ಅಂತ ಸಿದ್ದರಾಮಯ್ಯ ಹೇಳುತ್ತಿದ್ದಾರೆ. ನಾವು ಗ್ಯಾರಂಟಿ ವಿರೋಧಿಗಳಲ್ಲ. ಆದರೆ ಗ್ಯಾರಂಟಿಗಳನ್ನು ಸರಿಯಾಗಿ ಅನುಷ್ಟಾನ ಮಾಡಿಲ್ಲ ಅಂತ ಹೇಳುತ್ತಿದ್ದೇವೆ. ಗ್ಯಾರಂಟಿಗಳಿಗೆ ಮೋಸ ಮಾಡ್ತಾ ಇರೋದು ಕಾಂಗ್ರೆಸ್. ಇನ್ನೂ ಇಪ್ಪತ್ತೈದು ಗ್ಯಾರಂಟಿ ಕೊಡಿ ನಾವು ಬೇಡ ಅನ್ನಲ್ಲ. ಆದರೆ ಸರಿಯಾಗಿ ಕೊಡಿ ಎಂದರು.
ಹಿಂದುಳಿದ ವರ್ಗಕ್ಕೆ ಮೋಸ ಮಾಡಿರುವ ಸಿದ್ದರಾಮಯ್ಯ ಅವರ ಹೆಸರು ಹೇಳಿಕೊಂಡು ಮತ ಕೇಳುತ್ತಿದ್ದಾರೆ. ಮೂರು ವರ್ಷ ಆದರೂ ಹಿಂದುಳಿದ ವರ್ಗದ ಎಂಟು ನಿಗಮಗಳಿಗೆ ಅಧ್ಯಕ್ಷರನ್ನೇ ನೇಮಕ ಮಾಡಿಲ್ಲ. ಅನುದಾನ ಕೊಟ್ಟಿಲ್ಲ. ನಿಗಮಗಳ ಹಣವನ್ನೂ ನುಂಗಿ ಹಾಕಿದ್ದಾರೆ. ವಾಲ್ಮೀಕಿ ನಿಗಮದ ಹಣ ಲೂಟಿ ಮಾಡಿದ್ದಾರೆ ಎದು ಆಕ್ರೋಶ ಹೊರಹಾಕಿದರು.