ನವದೆಹಲಿ, ಏ. 03 (DaijiworldNews/AA): ಕರ್ನಾಟಕ ಕಾಂಗ್ರೆಸ್ ಸರ್ಕಾರ ಸಂಪೂರ್ಣ ದಿವಾಳಿಯಾದ ಪರಿಣಾಮ ಸಿಕ್ಕ ಸಿಕ್ಕಲ್ಲಿ ಹಣ ಹೊಂದಿಸಲು ಕೈ ಹಾಕುತ್ತಿದೆ. ಧನ ದಾಹದಿಂದ ಆತ್ಮನಿರ್ಭರ ಭಾರತಕ್ಕೆ ಕೊಡಲಿ ಪೆಟ್ಟು ಕೊಡುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೆಹಲಿಯಲ್ಲಿ ಮಾತನಾಡಿದ ಅವರು, "ಕರ್ನಾಟಕ ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ ನೀತಿ, ಹಣ ಕ್ರೋಢೀಕರಣ ದಾಹ ಇದೀಗ ಎಲೆಕ್ಟ್ರಿಕ್ ವಾಹನಗಳನ್ನೂ ಬಿಟ್ಟಿಲ್ಲ. ಇದು ಸ್ವಾವಲಂಬಿ ಭಾರತದ ಕಾರ್ಯಾನುಷ್ಠಾನಕ್ಕೆ ತೊಡಕಾಗಿದೆ. ಮಧ್ಯಪ್ರಾಚ್ಯ ಸಂಘರ್ಷದಲ್ಲಿ ಜಗತ್ತೇ ಗ್ಯಾಸ್, ಕಚ್ಚಾ ತೈಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳಿಲ್ಲದೆ ತತ್ತರಿಸುತ್ತಿದೆ. ಭಾರತ ಪೆಟ್ರೋಲಿಯಂ ಉತ್ಪನ್ನಗಳ ಆಮದು ತಗ್ಗಿಸಲು ನವೀಕರಿಸಬಹುದಾದ ಇಂಧನ ಹಾಗೂ ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚಿನ ಆದ್ಯತೆ, ಅಗತ್ಯ ಪ್ರೋತ್ಸಾಹ ನೀಡುತ್ತಿದೆ. ಆದರೆ, ರಾಜ್ಯ ಕಾಂಗ್ರೆಸ್ ಸರ್ಕಾರ ಕೇಂದ್ರದ ಇಂಥ ಸ್ವಾವಲಂಬಿ ಯೋಜನೆಗಳನ್ನ ಹಾಳುಗೆಡವುವ ಕೆಲಸ ಮಾಡುತ್ತಿದೆ" ಎಂದರು.
"ರಾಜ್ಯ ಸರ್ಕಾರ ಎಲೆಕ್ಟ್ರಿಕ್ ವಾಹನಗಳಿಗೆ ನೀಡಿದ್ದ ತೆರಿಗೆ ವಿನಾಯಿತಿ ಹಿಂಪಡೆದು ಪರಿಸರ ಸ್ನೇಹಿ ವಾಹನಗಳನ್ನು ದೂರವಿಡುತ್ತಿದೆ. ಜನತೆ ಮತ್ತೆ ಪೆಟ್ರೋಲ್, ಡಿಸೇಲ್ ವಾಹನಗಳತ್ತ ಹಿಂತಿರುಗಲು ದಾರಿ ಮಾಡಿ ಕೊಟ್ಟಂತಾಗಿದೆ. ಸರ್ಕಾರ ಇದನ್ನು ಅರ್ಥ ಮಾಡಿಕೊಳ್ಳಲಿ" ಎಂದು ತಿಳಿಸಿದರು.
"ಮೂರೂವರೆ ಲಕ್ಷ ಕೋಟಿ ರೂಪಾಯಿ ಬಜೆಟ್ ಮಂಡಿಸಿದಂತಹ ರಾಜ್ಯ ಸರ್ಕಾರ ಇದೀಗ ಕೇವಲ 250 ಕೋಟಿ ರೂ. ಆದಾಯ ಸಂಗ್ರಹಕ್ಕಾಗಿ ಇಗಿ ವಾಹನಗಳ ಮೇಲಿನ ತೆರಿಗೆ ವಿನಾಯಿತಿ ಹಿಂಪಡೆದಿದೆ. ಇಷ್ಟು ಸಣ್ಣ ಸಣ್ಣ ಮೊತ್ತ ಕ್ರೋಢೀಕರಣಕ್ಕೂ ಜನಸಾಮಾನ್ಯರ ಮೇಲೆ ಬರೆ ಎಳೆಯುತ್ತಿದೆ ಎಂದರೆ ರಾಜ್ಯ ಸರ್ಕಾರ ಅದೆಷ್ಟರ ಮಟ್ಟಿಗೆ ಆರ್ಥಿಕವಾಗಿ ದಿವಾಳಿಯಾಗಿದೆ ಎಂಬುದನ್ನು ಸೂಚಿಸುತ್ತದೆ" ಎಂದು ತಿಳಿಸಿದರು.
"ಇವಿ ವಾಹನಗಳಿಗೆ ಲೈಫ್ ಟೈಮ್ ಟ್ಯಾಕ್ಸ್ ಹಾಕುವ ಮೂಲಕ ಸರ್ಕಾರ ಹಣ ಸಂಪಾದನೆ ದಾರಿ ಮಾಡಿಕೊಂಡಿದೆ. ಆರ್ಥಿಕ ದಿವಾಳಿತನ ತಪ್ಪಿಸಿಕೊಳ್ಳಲು ಸಿಕ್ಕ ಸಿಕ್ಕಲ್ಲಿ ಹೆಚ್ಚಿನ ವ್ಯಾಟ್ ಸಂಗ್ರಹಕ್ಕೆ ಮುಂದಾಗಿದೆ. ಪೆಟ್ರೋಲ್, ಡೀಸೆಲ್ ಮೇಲೆ ಹೆಚ್ಚು ತೆರಿಗೆ ಅಂದರೆ, ರಾಜ್ಯದ ಪಾಲಿನ ಕಮರ್ಷಿಯಲ್ ಟ್ಯಾಕ್ಸ್ ವಿಧಿಸಲು ಅವಕಾಶವಿದ್ದು, ಇದರಿಂದ ಆದಾಯ ಹೆಚ್ಚುತ್ತದೆಂಬ ಏಕ ಆಲೋಚನೆಯಲ್ಲಿ ಕರ್ನಾಟಕ ಸರ್ಕಾರ ಈ ರೀತಿ ವರ್ತಿಸುತ್ತಿದೆ. ಭಾರತ 2030 ರ ವೇಳೆಗೆ ಶೇ.೫೦ರಷ್ಟು ಇಂಗಾಲ ಹೊರಸೂಸುವಿಕೆ ಕಡಿಮೆ ಮಾಡುವ ಗುರಿ ಹೊಂದಿದ್ದರೆ, ರಾಜ್ಯ ಸರ್ಕಾರ ಇದಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ" ಎಂದು ಕಿಡಿಕಾರಿದರು.
"ಭಾರತ ಇಂದು ಶುದ್ಧ ಇಂಧನ ಮತ್ತು ಎಲೆಕ್ಟ್ರಿಕ್ ವಾಹನಗಳತ್ತ ಸಾಗುತ್ತಿದ್ದು, ಜಗತ್ತೇ ನಮ್ಮ ದೇಶವನ್ನ ಅನುಸರಿಸುತ್ತಿದೆ. ಆದರೆ, ರಾಜ್ಯ ಕಾಂಗ್ರೆಸ್ ಸರ್ಕಾರ, ದೇಶದ ಸುಸ್ಥಿರ ಭವಿಷ್ಯದ ಆಶಯಗಳಿಗೆ ತಣ್ಣೀರೆರಚುತ್ತಿದೆ. ಕಚ್ಚಾ ತೈಲ ಬೆಲೆ ಆಕಾಶಕ್ಕೇರಿದ ಪ್ರಸ್ತುತ ಸಂದರ್ಭದಲ್ಲಿ ಇವಿ ವಾಹನಗಳು ಜನಸಾಮಾನ್ಯರ ಕೈಗೆಟುಕದಂತೆ ದುಬಾರಿ ಮಾಡುತ್ತಿದೆ" ಎಂದರು.