ನವದೆಹಲಿ, ಏ. 03 (DaijiworldNews/TA): ಎಲ್ಪಿಜಿ ಸಿಲಿಂಡರ್ ಲಭ್ಯತೆ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಹರಡುತ್ತಿರುವ ತಪ್ಪು ಮಾಹಿತಿಗಳಿಗೆ ಕೇಂದ್ರ ಸರ್ಕಾರ ತೀವ್ರ ಕಳವಳ ವ್ಯಕ್ತಪಡಿಸಿದೆ. ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು, ಮಾಹಿತಿ ಸಂವಹನ ವ್ಯವಸ್ಥೆಯನ್ನು ಬಲಪಡಿಸುವಂತೆ ಸೂಚಿಸಿದೆ.

ಪ್ರಸ್ತುತ ದೇಶದಲ್ಲಿ ಕೇವಲ 17 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಮಾತ್ರ ನಿಯಮಿತ ಸುದ್ದಿಗೋಷ್ಠಿಗಳನ್ನು ನಡೆಸುತ್ತಿವೆ. ಈ ಕ್ರಮ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿಭಾಯಿಸಲು ಸಾಕಾಗುತ್ತಿಲ್ಲ ಎಂದು ಸಚಿವಾಲಯ ಅಭಿಪ್ರಾಯಪಟ್ಟಿದ್ದು, ಉಳಿದ ರಾಜ್ಯಗಳೂ ತಕ್ಷಣವೇ ಇದೇ ರೀತಿಯ ಕ್ರಮಗಳನ್ನು ಅನುಸರಿಸಬೇಕೆಂದು ಸೂಚಿಸಿದೆ.
ಪೆಟ್ರೋಲಿಯಂ ಕಾರ್ಯದರ್ಶಿ ನೀರಜ್ ಮಿತ್ತಲ್ ಅವರು ಬರೆದಿರುವ ಪತ್ರದಲ್ಲಿ, ಕೆಲ ಪ್ರದೇಶಗಳಲ್ಲಿ ಇನ್ನೂ ತಪ್ಪು ಮಾಹಿತಿಗಳು ಹರಡುತ್ತಿವೆ ಎಂದು ಉಲ್ಲೇಖಿಸಲಾಗಿದೆ. ಇದರಿಂದ ಜನರಲ್ಲಿ ಅನಗತ್ಯ ಆತಂಕ ಉಂಟಾಗಿ, ಕೆಲವು ಕಡೆಗಳಲ್ಲಿ ಅತಿಯಾದ ಖರೀದಿ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಸಾಮಾಜಿಕ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳ ಮೂಲಕ ಸಮಯಕ್ಕೆ ಸರಿಯಾದ ಹಾಗೂ ನಿಖರ ಮಾಹಿತಿ ನೀಡುವಂತೆ ರಾಜ್ಯಗಳಿಗೆ ಸೂಚಿಸಲಾಗಿದೆ. ದೇಶದಲ್ಲಿ ಎಲ್ಪಿಜಿ ಸಿಲಿಂಡರ್ಗಳು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದ್ದು, ವಿತರಣಾ ವ್ಯವಸ್ಥೆ ಸಹ ಸುಗಮವಾಗಿ ನಡೆಯುತ್ತಿದೆ ಎಂಬುದನ್ನು ಜನರಿಗೆ ಸ್ಪಷ್ಟಪಡಿಸುವಂತೆ ತಿಳಿಸಲಾಗಿದೆ. ಇದೇ ವೇಳೆ, ಕಳ್ಳಬಜಾರ್ (ಬ್ಲ್ಯಾಕ್ ಮಾರ್ಕೆಟ್) ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಗಳಿಗೆ ಕೇಂದ್ರ ಸೂಚನೆ ನೀಡಿದೆ.