ಮಹಾರಾಷ್ಟ್ರ, ಏ. 04 (DaijiworldNews/TA): ನಾಸಿಕ್ ಜಿಲ್ಲೆಯ ದಿಂಡೋರಿ ತಾಲೂಕಿನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಕಾರು ಬಾವಿಗೆ ಬಿದ್ದ ಪರಿಣಾಮ 9 ಮಂದಿ ಮೃತಪಟ್ಟಿದ್ದಾರೆ. ಮೃತರಲ್ಲಿ 6 ಮಕ್ಕಳು ಸೇರಿರುವುದು ದುರಂತವನ್ನು ಇನ್ನಷ್ಟು ಹೃದಯವಿದ್ರಾವಕವಾಗಿಸಿದೆ.

ಪೊಲೀಸರ ಮಾಹಿತಿ ಪ್ರಕಾರ, ಮಾರುತಿ XL6 ಕಾರಿನ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ಬಾವಿಗೆ ಉರುಳಿ ಬಿದ್ದಿದೆ. ಪರಿಣಾಮವಾಗಿ ವಾಹನದಲ್ಲಿದ್ದ ಎಲ್ಲ 9 ಪ್ರಯಾಣಿಕರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಪ್ರಾಥಮಿಕ ಮಾಹಿತಿ ಪ್ರಕಾರ, ಮೃತರೆಲ್ಲರೂ ಒಂದೇ ಕುಟುಂಬದವರಾಗಿದ್ದು, ಇಂದೋರ್ ಗ್ರಾಮದ ದರ್ಗುಡೆ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಮೃತರಲ್ಲಿ ಸುನಿಲ್ ದರ್ಗುಡೆ, ಅವರ ಪತ್ನಿ ಹಾಗೂ ಮಗಳು ಸೇರಿದ್ದಾರೆ ಎಂದು ತಿಳಿದುಬಂದಿದೆ. ಸಾವನ್ನಪ್ಪಿದ ಮಕ್ಕಳಲ್ಲಿ 7 ವರ್ಷದ ಬಾಲಕಿಯೂ ಒಬ್ಬಳಾಗಿದ್ದಾಳೆ. ಈ ದುರ್ಘಟನೆ ಸಂಭವಿಸುವ ವೇಳೆ ಕುಟುಂಬದವರು ಖಾಸಗಿ ಕಾರ್ಯಕ್ರಮವೊಂದರಿಂದ ವಾಪಸ್ಸಾಗುತ್ತಿದ್ದರು ಎಂದು ಹೇಳಲಾಗಿದೆ. ಚಾಲಕನ ನಿಯಂತ್ರಣ ತಪ್ಪಿ ಕಾರು ನೇರವಾಗಿ ನೀರು ತುಂಬಿದ ಬಾವಿಗೆ ಬಿದ್ದಿದೆ ಎನ್ನಲಾಗಿದೆ.
ಘಟನೆಯ ಮಾಹಿತಿ ತಿಳಿದ ತಕ್ಷಣ ಸ್ಥಳೀಯರು ಮತ್ತು ಪೊಲೀಸರು ರಕ್ಷಣಾ ಕಾರ್ಯಕ್ಕೆ ಧಾವಿಸಿದರು. ಎನ್ಡಿಆರ್ಎಫ್ ಸಿಬ್ಬಂದಿಯೂ ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ಆರಂಭಿಸಿದರು. ಆದರೆ ಸ್ಥಳದಲ್ಲಿ ಜನಸಂದಣಿ ಹೆಚ್ಚಿದ್ದರಿಂದ ರಕ್ಷಣಾ ಕಾರ್ಯಕ್ಕೆ ಅಡಚಣೆ ಉಂಟಾಯಿತು ಎಂದು ತಿಳಿದುಬಂದಿದೆ. ತಡರಾತ್ರಿವರೆಗೂ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ದಿಂಡೋರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಅಪಘಾತದ ನಿಖರ ಕಾರಣವನ್ನು ಪತ್ತೆಹಚ್ಚಲು ತನಿಖೆ ನಡೆಸುತ್ತಿದ್ದಾರೆ.