ಚಿಕ್ಕಮಗಳೂರು, ಏ. 04 (DaijiworldNews/TA): ಜಿಲ್ಲೆಯ ಕಡೂರು ತಾಲೂಕಿನ ಬೋರಗಾನಹಳ್ಳಿ ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ಮದುವೆ ವಯಸ್ಸಿಗೆ ಬಂದರೂ ಮದುವೆಯಾಗದ ವಿಚಾರದಿಂದ ಮಾನಸಿಕವಾಗಿ ನೊಂದ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಮೃತ ಯುವಕ ಕುಮಾರ್ (26) ಎಂದು ಗುರುತಿಸಲಾಗಿದೆ. ಇವರು ಸಿರಾ ತಾಲೂಕಿನ ಬ್ರಹ್ಮಸಂದ್ರ ಗ್ರಾಮದ ನಿವಾಸಿಯಾಗಿದ್ದು, ಕಳೆದ ಕೆಲವು ದಿನಗಳಿಂದ ಬೋರಗಾನಹಳ್ಳಿಯ ತೋಟವೊಂದರಲ್ಲಿ ಕುರಿಗಾಹಿಯಾಗಿ ಕೆಲಸ ಮಾಡುತ್ತಿದ್ದರು.
ಮಾಹಿತಿ ಪ್ರಕಾರ, ರಾಮ ನವಮಿ ಹಬ್ಬದ ವೇಳೆ ಊರಿಗೆ ತೆರಳಿದ್ದ ಕುಮಾರ್, ಪೋಷಕರಿಗೆ ಮದುವೆ ಮಾಡಿಕೊಡಲು ಒತ್ತಾಯಿಸಿದ್ದರು. ಆದರೆ ‘ಮೊದಲು ಇಬ್ಬರು ಸಹೋದರರ ಮದುವೆ ಬಳಿಕ ನಿನ್ನದು’ ಎಂದು ಪೋಷಕರು ಹೇಳಿದ್ದರಿಂದ ಅವರು ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ.
ಈ ವಿಷಯ ಮನಸ್ಸಿಗೆ ತೀವ್ರವಾಗಿ ತಗುಲಿದ್ದು, ನಂತರ ಬೋರಗಾನಹಳ್ಳಿಗೆ ಮರಳಿದ ಕುಮಾರ್ ಮದ್ಯ ಸೇವಿಸಿ ತೆಂಗಿನ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆ ಯಗಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣವೇನು ಎಂಬುದನ್ನು ಪತ್ತೆಹಚ್ಚಲು ತನಿಖೆ ಮುಂದುವರೆದಿದೆ.