ನವದೆಹಲಿ, ಏ. 05 (DaijiworldNews/TA): ಟಾಟಾ ಟ್ರಸ್ಟ್ಸ್ ನಡಿಯಲ್ಲಿ ಬರುವ ಬಾಯಿ ಹೀರಾಬಾಯಿ ಚಾರಿಟೇಬಲ್ ಟ್ರಸ್ಟ್ನ ಟ್ರಸ್ಟೀ ಸ್ಥಾನದಿಂದ ವೇಣು ಶ್ರೀನಿವಾಸನ್ ಹಿಂದೆ ಸರಿದಿದ್ದಾರೆ. ಟ್ರಸ್ಟೀ ಆಗಿ ಮುಂದುವರಿಯಲು ಅರ್ಹತೆ ಇಲ್ಲ ಎನ್ನುವ ಆಕ್ಷೇಪಗಳು ವ್ಯಕ್ತವಾದ ಹಿನ್ನೆಲೆ ಅವರು ಈ ನಿರ್ಧಾರ ಕೈಗೊಂಡಿದ್ದಾರೆ.

ಈ ವಿಷಯಕ್ಕೆ ಸಂಬಂಧಿಸಿ ಮಾಜಿ ಟ್ರಸ್ಟೀ ಮೆಹ್ಲಿ ಮಿಸ್ತ್ರಿ ಅವರು ಟ್ರಸ್ಟೀಗಳ ಆಯ್ಕೆ ಅಕ್ರಮವಾಗಿ ನಡೆದಿದೆ ಎಂದು ಆಕ್ಷೇಪ ಸಲ್ಲಿಸಿದ್ದರು. ಮಹಾರಾಷ್ಟ್ರ ಚಾರಿಟಿ ಕಮಿಷನರ್ ಮುಂದೆ ಅಫಿಡವಿಟ್ ಸಲ್ಲಿಸಿರುವ ಅವರು, ನೇಮಕಾತಿ ಪ್ರಕ್ರಿಯೆ ಬಗ್ಗೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದರು.
ರತನ್ ಟಾಟಾ ವೇಣು ಶ್ರೀನಿವಾಸನ್ ಅವರನ್ನು ಈ ಟ್ರಸ್ಟ್ಗೆ ಟ್ರಸ್ಟೀ ಆಗಿ ನೇಮಿಸಿದ್ದರು. ಆದರೆ ಈ ನೇಮಕಾತಿ ಆಗಿದ್ದಾಗಲೇ ವಿವಾದಕ್ಕೆ ಕಾರಣವಾಗಿತ್ತು. ಈ ಟ್ರಸ್ಟ್ನ ಮೂಲ ನಿಯಮಗಳ ಪ್ರಕಾರ, ಟ್ರಸ್ಟೀ ಸ್ಥಾನವನ್ನು ಪಾರ್ಸಿ ಸಮುದಾಯದವರಿಗೆ ಮಾತ್ರ ಮೀಸಲಿರಿಸಲಾಗಿದೆ. ಆದರೆ ಪ್ರಸ್ತುತ ಟ್ರಸ್ಟೀಗಳಾದ ವೇಣು ಶ್ರೀನಿವಾಸನ್ ಮತ್ತು ವಿಜಯ್ ಸಿಂಗ್ ಪಾರ್ಸಿ ಸಮುದಾಯಕ್ಕೆ ಸೇರಿಲ್ಲ ಎಂಬುದು ವಿವಾದದ ಕೇಂದ್ರಬಿಂದುವಾಗಿದೆ. ಇದೇ ರೀತಿಯಾಗಿ, ಹಿಂದಿನ ಟ್ರಸ್ಟೀ ಆರ್. ಕೃಷ್ಣಕುಮಾರ್ ಕೂಡ ಪಾರ್ಸಿ ಸಮುದಾಯದವರಲ್ಲ ಎಂಬುದನ್ನು ಮೆಹ್ಲಿ ಮಿಸ್ತ್ರಿ ಉಲ್ಲೇಖಿಸಿದ್ದಾರೆ.
ಹೀಗಾಗಿ, ಈ ನೇಮಕಾತಿಗಳು ಟ್ರಸ್ಟ್ನ ಮೂಲ ನಿಯಮಗಳ ಉಲ್ಲಂಘನೆ ಆಗಿದ್ದು, ಇಂತಹ ಟ್ರಸ್ಟೀಗಳು ತೆಗೆದುಕೊಳ್ಳುವ ನಿರ್ಧಾರಗಳು ಮಾನ್ಯವಾಗುವುದಿಲ್ಲ ಎಂದು ಮಿಸ್ತ್ರಿ ವಾದಿಸಿದ್ದಾರೆ.
ಮುಂಬೈ ಮತ್ತು ನವಸಾರಿಯಲ್ಲಿ ಪಾರ್ಸಿ ಸಮುದಾಯಕ್ಕಾಗಿ ಅಗ್ನಿ ಮಂದಿರ, ಶಾಲೆಗಳು ಮತ್ತು ವಾಸ ಸೌಲಭ್ಯಗಳನ್ನು ಈ ಟ್ರಸ್ಟ್ ನಿರ್ವಹಿಸುತ್ತಿದೆ. ಶತಮಾನಕ್ಕೂ ಹಳೆಯ ಈ ಟ್ರಸ್ಟ್ನಲ್ಲಿ ಆಡಳಿತ ದುರುಪಯೋಗವನ್ನು ತಡೆಯುವುದು ಅಗತ್ಯ ಎಂದು ಅವರು ಒತ್ತಿಹೇಳಿದ್ದಾರೆ.